

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ ಮಾರ್ಚ್ 19ರಂದು ಎಸ್.ಎಸ್. ಶೆಟ್ಟರ್ ಫೌಂಡೇಷನ್ ಹಾಗೂ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ನೇತೃತ್ವದಲ್ಲಿ ಹುಬ್ಬಳ್ಳಿ ಯುಗಾದಿ ಉತ್ಸವ ಆಯೋಜಿಸಲಾಗುತ್ತಿದೆ. ಯುಗಾದಿ ಮಹತ್ವವನ್ನು ಸಾರುವ ಹಾಗೂ ಯುವ ಸಮೂಹಕ್ಕೆ ನಮ್ಮ ಸಂಪ್ರದಾಯದ ಅರಿವು ಮೂಡಿಸುವ ಉದ್ದೇಶ ಉತ್ಸವದ್ದಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಭಾನುವಾರ ಹುಬ್ಬಳ್ಳಿ ಯುಗಾದಿ ಉತ್ಸವ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾ. 19ರಂದು ಇಡೀ ದಿನ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಮೆರವಣಿಗೆ ನಡೆಯಲಿದೆ. ಮೆರವಣಿಯಲ್ಲಿ ಚಕ್ಕಡಿ ಗಾಡಿ, ವೀರಗಾಸೆ, ಡೊಳ್ಳು, ಗೊಂಬೆಗಳು ಇರಲಿವೆ. ಬಳಿಕ ಜಾನಪದ ಕಲಾ ತಂಡದಿಂದ ಗೀಗಿ ಪದ, ಜಾನಪದ ಗೀತೆ, ಲಾವಣಿ ಪದ, ನೃತ್ಯ ಪ್ರದರ್ಶನ ನಡೆಯಲಿದೆ. ಆಲ್ ದಿ ಬೆಸ್ಟ್ ನಾಟಕ, ಗ್ರಾಮೀಣ ಕ್ರೀಡೆಗಳು, ಮೈಸೂರಿನ ರಿಚರ್ಡ್ ಲೂಯಿಸ್ ತಂಡದಿಂದ ಹಾಸ್ಯ ಸಂಜೆ, ರಾಜೇಶ ಕೃಷ್ಣ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಈಶ್ವರೀಯ ವಿಶ್ವ ವಿದ್ಯಾಲಯದಿಂದ ನಿರ್ವಿುಸಲಾಗುವ ಬೃಹತ್ ಈಶ್ವರ ಲಿಂಗ ದರ್ಶನ, ಫಲಪುಷ್ಪ ಪ್ರದರ್ಶನ, ಆಹಾರ ಮಳಿಗೆಗಳು ಉತ್ಸವದಲ್ಲಿ ಇರಲಿವೆ ಎಂದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಎಂಎಲ್ಸಿ ಪ್ರದೀಪ ಶೆಟ್ಟರ್, ಎಸ್ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್, ಮಲ್ಲಿಕಾರ್ಜುನ ಸಾವಕಾರ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಇದ್ದರು. ಪ್ರಕಾಶ ಶೇಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಭು ನವಲಗುಂದಮಠ ವಂದಿಸಿದರು.