

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಮುಂಜಾನೆಯ ಚಳಿ ಲೆಕ್ಕಿಸದೆ ಓಟದತ್ತ ದೃಷ್ಟಿ ನೆಟ್ಟು ಆಗಮಿಸಿದ್ದ ಮಕ್ಕಳು, ಹಿರಿಯರು, ಬಿವಿಬಿ ಇಂಜಿನಿಯರಿಂಗ್ ಕಾಲೇಜ್ನ ಅಮೃತ ಮಹೋತ್ಸವ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ‘ಹುಬ್ಬಳ್ಳಿ ಮ್ಯಾರಥಾನ್-2023’ನ ನಿಗದಿತ ಗುರಿ ತಲುಪಿ ಸಂಭ್ರಮಿಸಿದರು.
‘ನಮ್ಮ ನಡೆ ಭವ್ಯ ಭಾರತದ ಕಡೆ’ ಧ್ಯೇಯದೊಂದಿಗೆ 14 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿತ್ತು. 14 ವರ್ಷದೊಳಗೆ, 15-49 ವಯೋಮಾನ ಹಾಗೂ 50 ವರ್ಷ ಮೇಲ್ಪಟ್ಟವರು (ಮಹಿಳೆಯರು-ಪುರುಷರು) ಭಾಗವಹಿಸಿದ್ದರು.
ಬಿವಿಬಿ ಕ್ಯಾಂಪಸ್ನ ಮುಖ್ಯ ದ್ವಾರದಿಂದ ಆರಂಭವಾದ ಓಟ ಕೇಶ್ವಾಪುರ, ರೈಲ್ವೆ ಸ್ಟೇಷನ್ ರೋಡ್, ಗೋಕುಲ ರೋಡ್, ತೋಳನಕೆರೆ ಹಾದು ಶ್ರೀಕಾಡಸಿದ್ಧೇಶ್ವರ ಕಾಲೇಜ್ ಮೂಲಕ ಬಿವಿಬಿ ಕಾಲೇಜ್ನ ಮುಖ್ಯ ದ್ವಾರವನ್ನು ತಲುಪಿತು. ದಾರಿಯುದ್ದಕ್ಕೂ ಜನರು ಪ್ರೋತ್ಸಾಹ ತುಂಬಿದರು. ನಿಗದಿತ ಸ್ಥಳ ತಲುಪಿದ ಬಳಿಕ ಸ್ಪರ್ಧಿಗಳಿಗೆ ಕುಡಿಯುವ ನೀರು, ಚಿಕ್ಕಿ ವಿತರಿಸಲಾಯಿತು. ಆರೂವರೆ ಸಾವಿರಕ್ಕೂ ಅಧಿಕ ಜನರು ಮ್ಯಾರಥಾನ್ನಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ಮೋದಿ ಮಾತು ಪ್ರೇರಕ
‘ಹುಬ್ಬಳ್ಳಿ ಮ್ಯಾರಥಾನ್-2023’ಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸ್ಪೂರ್ತಿದಾಯಕ ಮಾತುಗಳು ಯುವಕರನ್ನು ಸೆಳೆದಿವೆ. ಸದೃಢ ಭಾರತ ನಿರ್ವಣಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ. ಮುಂಜಾನೆಯ ಚಳಿ ಲೆಕ್ಕಿಸದೇ ಮ್ಯಾರಥಾನ್ಗೆ ಬಂದಿರುವುದನ್ನು ನೋಡಿದರೆ, ನಿಮ್ಮಲ್ಲಿರುವ ಸ್ಪೂರ್ತಿಯೇ ಕಾರಣ ಎಂದು ಬಣ್ಣಿಸಿದರು.
ಕೆಎಲ್ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಅಶೋಕ ಶೆಟ್ಟರ್, ಡೀನ್ ಡಾ. ಸಂಜಯ ಕೊಟಬಾಗಿ, ಪ್ರೊ.ಬಿ.ಎಲ್. ದೇಸಾಯಿ, ಡಾ.ಪಿ.ಜಿ. ತೆವರಿ, ಡಾ.ಬಿ.ಎಸ್. ಅನಾಮಿ, ಬಿಜೆಪಿ ಮುಖಂಡ ವೀರೇಶ ಸಂಗಳದ ಇತರರು ಇದ್ದರು.