ಹುಬ್ಬಳ್ಳಿ ಮ್ಯಾರಥಾನ್ 22ರಂದು

h18-Marthon
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಬಿವಿಬಿ ಕಾಲೇಜ್​ನ ಅಮೃತ ಮಹೋತ್ಸವ ಹಾಗೂ ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆ ನಿಮಿತ್ತ ನಗರದ ಬಿವಿಬಿ ಕಾಲೇಜ್ ಆವರಣದಲ್ಲಿ ಜ. 22ರಂದು ಬೆಳಗ್ಗೆ 6.30ಕ್ಕೆ ‘ಹುಬ್ಬಳ್ಳಿ ಮ್ಯಾರಥಾನ್-2023’ ಏರ್ಪಾಟಾಗಿದೆ ಎಂದು ಕೆಎಲ್​ಇ ತಾಂತ್ರಿಕ ವಿವಿ ಪ ಕುಲಪತಿ ಡಾ. ಅಶೋಕ ಶೆಟ್ಟರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ನಡೆ ಭವ್ಯ ಭಾರತದ ಕಡೆ’ ಥೀಮ್ೊಂದಿಗೆ 14 ಕಿಮೀ ಮ್ಯಾರಥಾನ್ ಆಯೋಜಿಸಲಾಗಿದೆ ಎಂದರು.

14 ವರ್ಷದೊಳಗೆ, 15-49 ವಯೋಮಾನ ಹಾಗೂ 50 ವರ್ಷ ಮೇಲ್ಪಟ್ಟವರು (ಮಹಿಳೆಯರು-ಪುರುಷರು) ಭಾಗವಹಿಸಬಹುದು. ಗೆದ್ದವರಿಗೆ ವಿಶೇಷ ಬಹುಮಾನ ನಿಗದಿಪಡಿಸಲಾಗಿದೆ ಎಂದರು.

5 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ನೋಂದಣಿ ಸ್ಥಳದಲ್ಲಿಯೇ ಟೀಶರ್ಟ್, ಕ್ಯಾಪ್, ಪ್ರಮಾಣಪತ್ರ ನೀಡಲಾಗುವುದು. ಅಂದು ಬೆಳಗ್ಗೆ 5.30ಕ್ಕೆ ಎಲ್ಲರೂ ಹಾಜರಿರಬೇಕು. ಪ್ಲ್ಯಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬಿವಿಬಿ ಮುಂದಿನ ಗೇಟ್​ನಿಂದ ಮ್ಯಾರಥಾನ್ ಆರಂಭವಾಗಿ ನಗರದ ವಿವಿಧೆಡೆ ಸಂಚರಿಸಿ ಮರಳಿ ಕ್ಯಾಂಪಸ್ ತಲುಪಲಿದೆ ಎಂದರು.

ಮ್ಯಾರಥಾನ್​ಗೆ ಸಂಬಂಧಿಸಿದಂತೆ ಟೀಶರ್ಟ್, ಕ್ಯಾಪ್​ಗಳನ್ನು ಡಾ. ಅಶೋಕ ಶೆಟ್ಟರ್ ಬಿಡುಗಡೆಗೊಳಿಸಿದರು. ಡೀನ್ ಡಾ. ಸಂಜಯ ಕೊಟಬಾಗಿ, ಪ್ರೊ.ಬಿ.ಎಲ್. ದೇಸಾಯಿ, ಡಾ. ಪಿ.ಜಿ. ತೆವರಿ, ಡಾ.ಬಿ.ಎಸ್. ಅನಮಿ, ಮಧ್ವ ಕೋಲಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಣತಿ ಮತ್ತು ನಿಶತ್ ಇದ್ದರು.

ಅಮಿತ್ ಶಾ ಆಗಮನ

ಅಮೃತ ಮಹೋತ್ಸವ ನಿಮಿತ್ತ ಜ. 27,28 ಮತ್ತು 29ರಂದು ವಿವಿಧ ಕಾರ್ಯಕ್ರಮಗಳನ್ನು ಬಿವಿಬಿ ಕ್ಯಾಂಪಸ್​ನಲ್ಲಿ ಆಯೋಜಿಸಲಾಗಿದೆ ಎಂದು ಡಾ. ಅಶೋಕ ಶೆಟ್ಟರ್ ತಿಳಿಸಿದರು. ಜ. 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಇತರ ಗಣ್ಯರು ಆಗಮಿಸುವರು. ಅಂದು ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ನಿರ್ವಿುಸಿರುವ ಒಳಾಂಗಣ ಕ್ರೀಡಾಂಗಣವನ್ನು ಅಮಿತ್ ಶಾ ಲೋಕಾರ್ಪಣೆ ಮಾಡುವರು. 28ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸುವರು. 29ರಂದು ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮಾವೇಶ ಏರ್ಪಡಿಸಲಾಗಿದ್ದು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net