ಹುಬ್ಬಳ್ಳಿ ಮೈದಾನ ನನಗೆ ವಿಶೇಷವಾದದ್ದು

h9-Bharat 2
Published on

ಎಚ್11-ಸಂತೋಷ 2

ಹುಬ್ಬಳ್ಳಿ: ಹುಬ್ಬಳ್ಳಿ ರಾಜನಗರ ಕೆಎಸ್​ಸಿಎ ಮೈದಾನ ನನ್ನ ಪಾಲಿಗೆ ವಿಶೇಷವಾದದ್ದು. ಮೂರು ವರ್ಷಗಳ ಹಿಂದೆ ಶ್ರೀಲಂಕಾ ಎ ತಂಡದ ವಿರುದ್ಧ ಇದೇ ಮೈದಾನದಲ್ಲಿ ಶತಕ ಬಾರಿಸಿದ್ದೆ. ಈ ಬಾರಿಯೂ ಇಲ್ಲಿ ಉತ್ತಮ ಪ್ರದರ್ಶನ (ಅಜೇಯ 74ರನ್) ನೀಡಿರುವುದು ನನಗೆ ಖುಷಿ ಕೊಟ್ಟಿದೆ ಎಂದು ಭಾರತ ಎ ತಂಡದ ವಿಕೆಟ್ ಕೀಪರ್ ಕೆ. ಶ್ರೀಕರ ಭರತ ಹೇಳಿದರು.

ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ 2ನೇ ಚತುರ್ದಿನ ಟೆಸ್ಟ್ ಪಂದ್ಯದ 4ನೇ ದಿನದ ಆಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ಪಿಚ್ ಉತ್ತಮವಾಗಿದೆ. ಅದಕ್ಕಿಂತ ಮುಖ್ಯವಾಗಿ ಎದುರಾಳಿ ತಂಡದವರು ಉತ್ತಮವಾಗಿ ಬೌಲಿಂಗ್ ಮಾಡಿದರು ಎಂದರು.

ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿದೆ. ಅದು ನಮ್ಮ ಕೈಯಲ್ಲಿ ಇಲ್ಲ. ಮೈದಾನವು ಆಟಕ್ಕೆ ಯೋಗ್ಯವಾಗುವಂತೆ ಗ್ರೌಂಡ್ಸ್ ಸಿಬ್ಬಂದಿ ಸಾಕಷ್ಟು ಶ್ರಮಿಸಿದ್ದಾರೆ. ಪಂದ್ಯ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದು ಉತ್ತಮ ಸಂಗತಿ. ತಂಡಕ್ಕಾಗಿ ಆಡುವಾಗ ವೈಯಕ್ತಿಕ ಸಾಧನೆಗಳು ಮಹತ್ವ ಪಡೆಯುವುದಿಲ್ಲ. ನಾವು ಆಡುವ ಅಂತಿಮ-11ರಲ್ಲಿ ಇರಲಿ ಅಥವಾ ಹೊರಗುಳಿಯಲಿ ತಂಡ ಗೆಲ್ಲುವುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಎ ತಂಡದ ಪ್ರವಾಸವು ಉದಯೋನ್ಮುಖ ಆಟಗಾರರಿಗೆ ಒಳ್ಳೆಯ ವೇದಿಕೆಯಾಗಿದೆ. ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕುಲದೀಪ ಯಾದವ್ ಅವರಂಥ ಆಟಗಾರರು ಯುವಕರಿಗೆ ಪ್ರೇರಣೆಯಾಗುತ್ತಾರೆ. ಭಾರತ ಎ ತಂಡಕ್ಕೆ ಆಡಲು ಸಾಕಷ್ಟು ಸ್ಪರ್ಧೆ ಇದೆ. ಮತ್ತೊಬ್ಬರು ಉತ್ತಮವಾಗಿ ಆಡಿದರೆ ನಮಗೆ ಅವಕಾಶ ಕೈ ತಪ್ಪುವ ಸಾಧ್ಯತೆಗಳು ಇರುತ್ತದೆ. ಇದು ತಂಡದಲ್ಲಿನ ಸ್ಪರ್ಧೆಯನ್ನು ಸೂಚಿಸುತ್ತದೆ. ತಂಡಕ್ಕಾಗಿ ಹೆಚ್ಚಿನ ಕೊಡುಗೆ ನೀಡುವತ್ತ ಪ್ರತಿಯೊಬ್ಬರು ಪ್ರಯತ್ನಿಸಬೇಕಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net