

ಹುಬ್ಬಳ್ಳಿ:ಗಣೇಶಪೇಟ ಮೀನು ಮಾರುಕಟ್ಟೆ ಬಂದ್ ಆಗಿದ್ದವು. ಇಲ್ಲಿ ಸಗಟು ಹಾಗೂ ಚಿಲ್ಲರೆ ಮಾರಾಟ ಮಳಿಗೆಗಳು ತೆರೆಯಲಿಲ್ಲ. ಮೀನು, ಮಾಂಸ, ದಿನಸಿ ವಸ್ತುಗಳ ಮಾರಾಟಕ್ಕೆ ವಿನಾಯಿತಿ ಇದ್ದವು. ಆದರೂ ಮೀನು ಮಾರಾಟಗಾರರು ಸಂಪೂರ್ಣ ಬಂದ್ ಮಾಡಿದ್ದರು. ಪರಿಣಾಮ ಪ್ರತಿ ಭಾನುವಾರದಂದು ಹೆಚ್ಚಿನ ಸಂಖ್ಯೆಯ ಜನರಿಂದ ಗಿಜಿಗುಡುತ್ತಿದ್ದ ಗಣೇಶಪೇಟ ಮೀನು ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ವಾರದ ಉಳಿದ ದಿನಗಳಿಗೆ ಹೋಲಿಸಿದರೆ ಪ್ರತಿ ಭಾನುವಾರ 8-10 ಪಟ್ಟು ಅಧಿಕ ಮೀನು ಮಾರಾಟವಾಗುತ್ತಿದ್ದವು. ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರಲಿಲ್ಲ. ಗ್ರಾಹಕರೇ ಬರದಿದ್ದ ಮೇಲೆ ಅಂಗಡಿ ತೆರೆದರೆ ಏನೂ ಪ್ರಯೋಜನವಿಲ್ಲ ಎಂಬುದು ಮೀನು ಮಾರಾಟಗಾರರ ಲೆಕ್ಕಾಚಾರವಾಗಿತ್ತು. ಇಂದಿನದು ಸೋಮವಾರ ಮಾರಾಟ ಮಾಡಿದರಾಯಿತು ಎಂಬ ನಿರ್ಧಾರಕ್ಕೆ ಬಂದಂತಿದೆ. ಫಿಶ್ ಮಾಲ್ಗಳಾದ ದಾದಾ ಫಿಶ್ ಪ್ಯಾರಡೈಸ್ ಹಾಗೂ ಬಿಎಚ್ಕೆ ಫಿಶ್ ಮಾಲ್ ಮುಚ್ಚಿದ್ದವು. ಇಲ್ಲಿ ಚಿಕನ್ ಮಾರಾಟ ಮಳಿಗೆಗಳು ತೆರೆದಿದ್ದವು. ಅಶೋಕನಗರ, ಕೇಶ್ವಾಪುರ, ಕಮರಿಪೇಟ, ಉಣಕಲ್, ವಿದ್ಯಾನಗರ, ಇನ್ನಿತರ ಕಡೆ ಚಿಕನ್, ಮಟನ್ ಮಾರಾಟ ಮಳಿಗೆಗಳಲ್ಲಿ ಎಂದಿನಂತೆ ವ್ಯಾಪಾರ-ವಹಿವಾಟು ನಡೆಯಿತು. ಕೆಲವೆಡೆ ಜನರು ಸರದಿ ಸಾಲಿನಲ್ಲಿ ನಿಂತಿದ್ದರು.