ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮೇನಲ್ಲಿ ಇಲೆಕ್ಟ್ರಿಕ್ ರೈಲು

TRAIN
Published on

ಆನಂದ ಅಂಗಡಿ ಹುಬ್ಬಳ್ಳಿ
ಬಹುನಿರೀಕ್ಷಿತ ಹುಬ್ಬಳ್ಳಿ - ಬೆಂಗಳೂರು ಮಧ್ಯದ ರೈಲು ಮಾರ್ಗ ಡಬಲಿಂಗ್ ಕಾಮಗಾರಿ ಇದೇ ಡಿಸೆಂಬರ್ ಅಂತ್ಯಕ್ಕೆ ಹಾಗೂ ಇಲೆಕ್ಟ್ರಿಫಿಕೇಶನ್ ಕಾಮಗಾರಿ 2023ರ ಮಾರ್ಚ್‌ನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದ್ದು, ಮುಂದಿನ ಮೇ ವೇಳೆಗೆ ಎರಡೂ ಮಹಾನಗರಗಳ ಮಧ್ಯೆ ಇಲೆಕ್ಟ್ರಿಕ್ ರೈಲು ಸಂಚರಿಸುವುದು ಬಹುತೇಕ ಖಚಿತ.
ಹುಬ್ಬಳ್ಳಿ - ಬೆಂಗಳೂರು ಮಧ್ಯದ ಸುಮಾರು ಸುಮಾರು 469 ಕಿಮೀ ಉದ್ದದ ಮಾರ್ಗದಲ್ಲಿ ಹುಬ್ಬಳ್ಳಿ - ಚಿಕ್ಕಜಾಜೂರನ ಮಧ್ಯದ 190 ಕಿಮೀ ಮಧ್ಯದ ಕೆಲವೆಡೆ ಮಾತ್ರ ರೈಲು ಮಾರ್ಗ ದ್ವಿಪಥಗೊಳ್ಳುವುದು ಬಾಕಿ ಇತ್ತು. ಇದೀಗ ಬಾಕಿ ಇದ್ದ ಈ ಮಾರ್ಗದ ಹುಬ್ಬಳ್ಳಿ ದಕ್ಷಿಣ - ಸಂಶಿ ಮಧ್ಯದ 20 ಕಿಮೀ ಹಾಗೂ ದೇವರಗುಡ್ಡ - ಹಾವೇರಿ ಮಧ್ಯದ 25 ಕಿಮೀ ಉದ್ದದ ಮಾರ್ಗದ ಡಬಲಿಂಗ್ ಕಾಮಗಾರಿ ಇದೇ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಮಧ್ಯದ ಪೂರ್ಣ 469 ಕಿಮೀ ಉದ್ದದ ರೈಲು ಮಾರ್ಗ ದ್ವಿಪಥಗೊಂಡಂತಾಗುತ್ತದೆ.
ಬೆಂಗಳೂರು - ಹುಬ್ಬಳ್ಳಿ ಮಧ್ಯದ ರೈಲು ಮಾರ್ಗ ದ್ವಿಪಥಗೊಳಿಸುವ ಕಾಮಗಾರಿಗೆ ರೈಲ್ವೆ ಸಚಿವಾಲಯ 2015-16ರಲ್ಲಿಯೇ ಹಸಿರು ನಿಶಾನೆ ತೋರಿಸಿತ್ತು. ಈ ಕಾಮಗಾರಿಗೆ 1,954.21 ಕೋಟಿ ರೂ.ಗಳನ್ನು ಸಹ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿತ್ತು. ಕಾಮಗಾರಿಯ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ವಹಿಸಿಕೊಂಡಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಪಾಲು ಇಲ್ಲ. ಚಿಕ್ಕಬಾನಾವರ-ಹುಬ್ಬಳ್ಳಿ ಮಧ್ಯದ ರೈಲು ಮಾರ್ಗದ 469 ಕಿಮೀ ಇಲೆಕ್ಟ್ರಿಫಿಕೇಶನ್ ಕಾಮಗಾರಿಗೆ 850 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಇದರಲ್ಲಿ ಈಗಾಗಲೇ 193 ಕಿಮೀ ಉದ್ದದ ಮಾರ್ಗ ಇಲೆಕ್ಟ್ರಿಫಿಕೇಶನ್ ಆಗಿದೆ. ಇನ್ನುಳಿದ ಮಾರ್ಗದ ಇಲೆಕ್ಟ್ರಿಫಿಕೇಶನ್ ಕಾಮಗಾರಿ 2023ರ ಮಾರ್ಚ್‌ನಲ್ಲಿ ಮುಗಿಯುವ ಸಾಧ್ಯತೆ ಇದೆ. ಅಂದರೆ, ಹುಬ್ಬಳ್ಳಿ - ಬೆಂಗಳೂರು ಮಧ್ಯದಲ್ಲಿ ಏಪ್ರಿಲ್-ಮೇ ವರೆಗೆ ಇಲೆಕ್ಟ್ರಿಕ್ ರೈಲು ಸಂಚರಿಸುವುದು ಬಹುತೇಕ ಖಚಿತ.

ಬಾಕ್ಸ್
ಆರ್ಥಿಕತೆಗೆ ವೇಗ
ಬೆಂಗಳೂರು - ಹುಬ್ಬಳ್ಳಿ ಮಧ್ಯೆ ದ್ವಿಪಥ ಕಾಮಗಾರಿ ಪೂರ್ಣಗೊಂಡರೆ ರೈಲುಗಳ ಸಂಚಾರ ವೇಗವಾಗುತ್ತದೆ. ಈ ಮಾರ್ಗದಲ್ಲಿ ಇನ್ನಷ್ಟು ರೈಲುಗಳ ಸಂಚಾರ ಪ್ರಾರಂಭಿಸಲು ಅನುಕೂಲವಾಗುತ್ತದೆ. ಪ್ರಯಾಣಿಕರಷ್ಟೇ ಅಲ್ಲದೇ, ಸರಕು, ಸಾಗಣೆ ಸಾಗಾಟಕ್ಕೂ ಇದು ಸಹಕಾರಿ. ಇದರಿಂದ ಆರ್ಥಿಕತೆಗೂ ವೇಗ ಸಿಕ್ಕಂತಾಗುತ್ತದೆ. ಇಲೆಕ್ಟ್ರಿಕ್ ರೈಲುಗಳ ಸಂಚಾರದಿಂದ ಸಾಕಷ್ಟು ಡೀಸೆಲ್ ಉಳಿತಾಯವಾಗುತ್ತದೆ.

ಕೋಟ್
ಈ ಡಿಸೆಂಬರ್ ಅಂತ್ಯಕ್ಕೆ ಹುಬ್ಬಳ್ಳಿ - ಬೆಂಗಳೂರು ಮಧ್ಯದ ರೈಲು ಮಾರ್ಗ ಡಬಲಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಮೂರ‌್ನಾಲ್ಕು ತಿಂಗಳಲ್ಲಿ ಈ ಮಾರ್ಗದ ಇಲೆಕ್ಟ್ರಿಫಿಕೇಶನ್ ಕಾಮಗಾರಿಯೂ ಮುಗಿಯಲಿದೆ.

  • ಪ್ರಲ್ಹಾದ ಜೋಶಿ, ಕೇಂದ್ರ ಸಚಿವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net