ಹುಬ್ಬಳ್ಳಿ-ಬೆಂಗಳೂರು ಮಧ್ಯೆಮಾರ್ಚ್ ನಲ್ಲಿ ವಂದೇ ಭಾರತ್ ರೈಲು

h6-vande bharat rail
Published on

ಆನಂದ ಅಂಗಡಿ ಹುಬ್ಬಳ್ಳಿ

ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಹುಬ್ಬಳ್ಳಿ - ಬೆಂಗಳೂರು ಮಧ್ಯೆ 2023ರ ಮಾರ್ಚ್​ನಲ್ಲಿ ಸಂಚಾರ ಪ್ರಾರಂಭಿಸುವ ಸಾಧ್ಯತೆ ಇದೆ. ನೈಋತ್ಯ ರೈಲ್ವೆ ವಲಯದಿಂದ ಕೆಲಸ ಭರದಿಂದ ಸಾಗಿದೆ.

ಈಗಾಗಲೇ ಚೆನೈ-ಬೆಂಗಳೂರು ಹಾಗೂ ಮೈಸೂರು ಮಧ್ಯೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಂಚಾರ ಪ್ರಾರಂಭಿಸಿದೆ. ಎಸ್​ಎಸ್​ಎಸ್ ಹುಬ್ಬಳ್ಳಿ - ಬೆಂಗಳೂರು ಮಧ್ಯದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಂಚಾರವನ್ನು ಧಾರವಾಡದವರೆಗೆ ವಿಸ್ತರಿಸುವಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮನವಿ ಮಾಡಿದ್ದು, ಈ ರೈಲು ಧಾರವಾಡದಿಂದ ಸಂಚಾರ ಪ್ರಾರಂಭಿಸುವ ಸಾಧ್ಯತೆಯೂ ಇದೆ.

ಹುಬ್ಬಳ್ಳಿ - ಬೆಂಗಳೂರು ರೈಲು ಮಾರ್ಗ ಬಹುತೇಕ ದ್ವಿಪಥಗೊಂಡು, ಇಲೆಕ್ಟ್ರಿಫಿಕೇಶನ್ ಸಹ ಭಾಗಶಃ ಪೂರ್ಣಗೊಂಡಿದೆ. ಬಾಕಿ ಇರುವ ಹುಬ್ಬಳ್ಳಿ - ಚಿಕ್ಕಜಾಜೂರು ಮಧ್ಯದ 45 ಕಿಮೀ ಉದ್ದದ ಮಾರ್ಗ, ಹುಬ್ಬಳ್ಳಿ ದಕ್ಷಿಣ-ಸಂಶಿ ಮಧ್ಯದ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ 2023ರ ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ದೇವರಗುಡ್ಡ- ಹಾವೇರಿ ಮಧ್ಯದ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಈ ತಿಂಗಳ (ಡಿಸೆಂಬರ್) ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ.

ರೈಲು ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಪೂರ್ಣಗೊಂಡ ನಂತರ ಇಲೆಕ್ಟ್ರಿಫಿಕೇಶನ್​ಗೊಳಿಸುವ ಕೆಲಸ ಮುಗಿಸಲು ಕನಿಷ್ಠ 2 ತಿಂಗಳು ಬೇಕು. ಮಾರ್ಚ್​ವರೆಗೆ ಈ ಮಾರ್ಗ ಪೂರ್ತಿಯಾಗಿ ಇಲೆಕ್ಟ್ರಿಫಿಕೇಶನ್​ಗೊಳ್ಳುತ್ತದೆ. ಆ ನಂತರವಷ್ಟೇ ಈ ಮಾರ್ಗ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಂಚರಿಸಲು ಸನ್ನದ್ಧಗೊಳ್ಳುತ್ತದೆ.

ಬಾಕ್ಸ್

ಅತ್ಯಾಧುನಿಕ ಸೌಲಭ್ಯ

ವಂದೇ ಭಾರತ್ ರೈಲಿನಲ್ಲಿ ಸಂಚರಿಸುವುದೆಂದರೆ ವಿಮಾನದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ವೇಗ, ಸುರಕ್ಷತೆ ಮತ್ತು ಅತ್ಯಾಧುನಿಕ ಸೇವೆ ಈ ರೈಲಿನಲ್ಲಿ ದೊರೆಯಲಿವೆ. ವಿಮಾನದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಈ ರೈಲಿನಲ್ಲಿ ಸಿಗಲಿವೆ. ಪ್ರತಿ ಸೀಟಿಗೆ ಮೊಬೈಲ್ ಚಾರ್ಜರ್, ತಿಂಡಿಯ ಟೇಬಲ್ ಇರಲಿವೆ. ಎಲ್ಲ ಬೋಗಿಗಳಿಗೆ ಅಟೊಮೆಟಿಕ್ ಬಾಗಿಲು, ಪ್ರಯಾಣಿಕರಿಗೆ ಆಡಿಯೋ ಮೂಲಕ ಮಾಹಿತಿ ನೀಡುವ ಸೌಲಭ್ಯ, ಮನರಂಜನೆಗಾಗಿ ವೈಫೈ ಸೌಲಭ್ಯ, ಸುಖಕರ ಆಸನಗಳು, ಬಯೋವ್ಯಾಕ್ಯೂಮ್ ಹೊಂದಿದ ಶೌಚಾಲಯ ಇರಲಿವೆ. ಪ್ರತಿ ಬೋಗಿಯಲ್ಲಿ ಪ್ರಯಾಣಿಕರು ಇರುವ ಸ್ಥಳದಲ್ಲಿಯೇ ತಿಂಡಿ, ಊಟ ಪೂರೈಸಲಾಗುತ್ತದೆ. 16 ಎಸಿ ಬೋಗಿಗಳಲ್ಲಿ 2 ಎಕ್ಸಿಕ್ಯೂಟಿವ್ ಕ್ಲಾಸ್ ಬೋಗಿಗಳು ಇರಲಿವೆ. 1,128 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದು. ಅಂಗವಿಕಲ ಪ್ರಯಾಣಿಕರಿಗೂ ಸಾಕಷ್ಟು ಸೌಲಭ್ಯಗಳು ಇವೆ. ಈ ರೈಲು ಕಡಿಮೆ ನಿಲುಗಡೆಗಳನ್ನು ಹೊಂದಿದ್ದು, ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಗೊಳ್ಳಲಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆರು ಗಂಟೆಯಲ್ಲಿ ತಲುಪಲಿದೆ.

ಕೋಟ್

ಮಾರ್ಚ್-ಏಪ್ರಿಲ್​ನಿಂದ ವಂದೇ ಭಾರತ್ ರೈಲು ಹುಬ್ಬಳ್ಳಿ - ಬೆಂಗಳೂರು ಮಧ್ಯೆ ಸಂಚರಿಸುವ ಸಾಧ್ಯತೆಗಳು ಇವೆ. ಈ ರೈಲು ಧಾರವಾಡದಿಂದ ಸಂಚಾರ ಪ್ರಾರಂಭಿಸಬೇಕೆಂಬ ಆಶಯ ಇದೆ. ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ, ನಿರ್ಧರಿಸಲಾಗುವುದು.

- ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು

ಕೋಟ್

ಬೆಂಗಳೂರು - ಹುಬ್ಬಳ್ಳಿ ಮಧ್ಯೆ ಇನ್ನೂ ಕೆಲವೆಡೆ ರೈಲ್ವೆ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿ ಬಾಕಿ ಇದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಮಾರ್ಗವನ್ನು ಇಲೆಕ್ಟ್ರಿಫಿಕೇಶನ್​ಗೊಳಿಸಲಾಗುತ್ತದೆ. ನಂತರವಷ್ಟೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಂಚಾರ ಪ್ರಾರಂಭಗೊಳ್ಳುತ್ತದೆ.

- ಅನಿಶ ಹೆಗಡೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net