ಹುಬ್ಬಳ್ಳಿ ನಿಲ್ದಾಣವಿನ್ನು ಸಿದ್ಧಾರೂಢ ರೈಲ್ವೆ ಸ್ಟೇಷನ್

h9-siddarudha
Published on

ಹುಬ್ಬಳ್ಳಿ: ಇಲ್ಲಿಯ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮಿಗಳ ಹೆಸರನ್ನು ಇಡಬೇಕು ಎಂಬ ಹುಬ್ಬಳ್ಳಿಗರ ಸುದೀರ್ಘ ಕಾಲದ ಬೇಡಿಕೆಯನ್ನು ಕೇಂದ್ರದ ಎನ್​ಡಿಎ ಸರ್ಕಾರ ಮಾನ್ಯ ಮಾಡಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಟಿ. ಹೆದಾವೂ ಅವರು ಈ ಕುರಿತು ಕರ್ನಾಟಕದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದು, ಹುಬ್ಬಳ್ಳಿ ರೈಲು ನಿಲ್ದಾಣವನ್ನು ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲು ಕೇಂದ್ರದ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2019ರ ನವೆಂಬರ್ 22ರಂದು ಈ ಕುರಿತು ಕೇಂದ್ರಕ್ಕೆ ಬರೆದಿದ್ದ ಪತ್ರವನ್ನೂ ಅವರು ಪ್ರಸ್ತಾಪಿಸಿದ್ದಾರೆ.

ರಾಜ್ಯ ಸರ್ಕಾರವು ಹುಬ್ಬಳ್ಳಿ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಎಂದು ಮರುನಾಮಕರಣಗೊಳಿಸಿದ ಮೇಲೆ ಅದನ್ನು ದೇವನಾಗರಿ (ಹಿಂದಿ), ಇಂಗ್ಲಿಷ್ ಮತ್ತು ರಾಜ್ಯ ಭಾಷೆ ಕನ್ನಡದಲ್ಲಿ ಹೇಗೆ ಬರೆಯಬೇಕು ಎಂಬ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸುವಂತೆಯೂ ಅವರು ಕೋರಿದ್ದಾರೆ. ರಾಜ್ಯ ಸರ್ಕಾರವು ಮರುನಾಮಕರಣದ ಕುರಿತು ರಾಜ್ಯಪತ್ರದಲ್ಲಿ ಪ್ರಕಟಿಸಿದ ನಂತರ ಇಲ್ಲಿಯ ನಿಲ್ದಾಣವು ಶ್ರೀ ಸಿದ್ಧಾರೂಢ ರೈಲು ನಿಲ್ದಾಣ ಎಂದು ಕರೆಯಲ್ಪಡಲಿದೆ. ಹುಬ್ಬಳ್ಳಿಯ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು ಇಡಬೇಕು ಎಂದು ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸುತ್ತ ಬಂದಿತ್ತು. ಹಿಂದೆ ಟ್ರಸ್ಟ್ ಕಮಿಟಿ ಅಧ್ಯಕ್ಷರಾಗಿದ್ದ ಮಹೇಂದ್ರ ಸಿಂಘಿ, ನಂತರ ಬಂದ ಅಧ್ಯಕ್ಷರು ಮತ್ತು ಧರ್ಮದರ್ಶಿಗಳು ಸುರೇಶ ಪ್ರಭು ಅವರು ರೈಲ್ವೆ ಮಂತ್ರಿಯಾಗಿದ್ದಾಗಿನಿಂದಲೂ ಅರ್ಜಿ ಸಲ್ಲಿಸುತ್ತ ಬಂದಿದ್ದರು. ಪ್ರಸ್ತುತ ಕೇಂದ್ರದಲ್ಲಿ ಪಿಯೂಷ್ ಗೋಯಲ್ ಅವರು ರೈಲ್ವೆ ಸಚಿವ ಹಾಗೂ ಸುರೇಶ ಅಂಗಡಿ ಅವರು ರೈಲ್ವೆ ರಾಜ್ಯ ಸಚಿವರಾದ ನಂತರ ಪುನಃ ಮನವಿಪತ್ರ ಸಲ್ಲಿಸಲಾಗಿತ್ತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೂ ಶ್ರೀ ಸಿದ್ಧಾರೂಢ ಮಠ ಧರ್ಮದರ್ಶಿ ಮಂಡಳಿ ಹಾಗೂ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಕ್ತ ಶಿಫಾರಸಿನೊಂದಿಗೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು, ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು ಇಡಬೇಕೆಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಂಘ ಸಹ ಮನವಿ ಮಾಡಿತ್ತು. ಇನ್ನುಮುಂದೆ ವಿಮಾನ ನಿಲ್ದಾಣಕ್ಕೆ ರಾಯಣ್ಣ ನಾಮಕರಣ ಬೇಡಿಕೆಗೆ ಹೆಚ್ಚಿನ ಬಲ ಬರಬಹುದು.

ನೈಋತ್ಯ ರೈಲ್ವೆಯ ಕೇಂದ್ರ ಕಚೇರಿಯನ್ನೂ ಹೊಂದಿರುವ ಈ ನಗರದಲ್ಲಿರುವ ರೈಲು ನಿಲ್ದಾಣಕ್ಕೆ ಶತಮಾನದ ಇತಿಹಾಸವಿದೆ. ಇಲ್ಲಿಯ ರೈಲು ನಿಲ್ದಾಣಕ್ಕೆ ಈ ಮೊದಲು ಇಂಗ್ಲಿಷ್​ನಲ್ಲಿ ‘ಹುಬ್ಳಿ ಸ್ಟೇಷನ್’ ಎಂದು ಹೆಸರಿತ್ತು. 5 ವರ್ಷದ ಹಿಂದೆ ಅದನ್ನು ಸರ್ಕಾರಿ ದಾಖಲೆಗಳಲ್ಲಿಯ ಸೂಕ್ತ ತಿದ್ದುಪಡಿಗಳ ಮೇರೆಗೆ ‘ಹುಬ್ಬಳ್ಳಿ’ ಎಂದು ಮರುನಾಮಕರಣ ಮಾಡಲಾಯಿತು. ಈಗ, ಹುಬ್ಬಳ್ಳಿಯನ್ನು ಪೊರೆದ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳ ನಾಮಕರಣಕ್ಕೆ ಕಾಲ ಕೂಡಿ ಬಂದಿದೆ. ಶ್ರೀ ಸಿದ್ಧಾರೂಢರು ನೆಲೆ ನಿಂತಿದ್ದರಿಂದ ಹುಬ್ಬಳ್ಳಿಯ ಪಾವಿತ್ರ್ಯ ಹೆಚ್ಚಿದೆ. ಅದ್ವೈತ ಸಾಮ್ರಾಟ ಸಿದ್ಧಾರೂಢರ ದರ್ಶನಕ್ಕೆ ಬಾಲಗಂಗಾಧರ ತಿಲಕರು, ಮಹಾತ್ಮ ಗಾಂಧಿ ಸೇರಿ ಅನೇಕ ಗಣ್ಯರು ಬಂದಿದ್ದರು. ಸಿದ್ಧಾರೂಢ ಮಠಕ್ಕೆ ಕರ್ನಾಟಕ ಮಾತ್ರವಲ್ಲದೆ, ಅಕ್ಕಪಕ್ಕದ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಮಹಾನ್ ಅಧ್ಯಾತ್ಮ ಸಾಧಕನ ಹೆಸರನ್ನು ರೈಲು ನಿಲ್ದಾಣಕ್ಕೆ ಇಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿರುವುದು ಸಹಜವಾಗಿ ಈ ಭಾಗದಲ್ಲಿ ಹರ್ಷಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಮೇಲೆ ನಿಲ್ದಾಣದ ಫಲಕ ಮತ್ತು ದಾಖಲೆಗಳಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣ ಎಂದು ಬದಲಾವಣೆ ಮಾಡಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಸಚಿವ ಜೋಶಿ ಹರ್ಷ

ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆಯಂತೆ ರೈಲು ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣವೆಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸಲು ತಿಳಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಧಿಸೂಚನೆ ನಂತರ ಶ್ರೀಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣವಾಗಿ ಬದಲಾಗಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ಮುಕುಟಕ್ಕೆ ಈಗ ಮತ್ತೊಂದು ಹಿರಿಮೆಯ ಗರಿ ಸಿಕ್ಕಂತಾಗಿದೆ. ಸಿದ್ಧಾರೂಢರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಪವಾಡ ಪುರುಷ ಸಿದ್ಧಾರೂಡರಿಗೆ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ.

ಭಕ್ತ್ತ ಬೇಡಿಕೆ ಇದ್ದಿದ್ದರಿಂದ ಸಂಸದರಾಗಿದ್ದಾಗಿನಿಂದಲೂ ಸತತ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತ ಬಂದಿದ್ದೆ. ಇದೀಗ ಬೇಡಿಕೆ ಈಡೇರಿರುವುದರಿಂದ ಭಕ್ತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈಗಾಗಲೇ ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಇರುವ ಹುಬ್ಬಳ್ಳಿಯಲ್ಲಿ ವಿಶ್ವದ ಅತೀ ಉದ್ದವಾದ ಪ್ಲಾಟ್​ಫಾಮ್ರ್ ನಿರ್ವಣವಾಗುತ್ತಿದೆ ಎಂದು ಜೋಶಿ ತಿಳಿಸಿದ್ದಾರೆ.

ನಾಮಕರಣಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಅಮೀತ್ ಷಾ ಹಾಗೂ ಸಚಿವರಾದ ಪೀಯೂಷ್ ಗೋಯಲ್, ಸುರೇಶ ಅಂಗಡಿ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ.

ಬಹಳ ಸಂತೋಷದ ಕ್ಷಣ

ಈ ಭಾಗದ ಭಕ್ತರು, ಜನರ ಬಹುದಿನದ ಬೇಡಿಕೆಗೆ ಕೇಂದ್ರ ಸರ್ಕಾರ ಮನ್ನಣೆ ನೀಡಿದೆ ಎಂದು ಗಣ್ಯರು, ಹೋರಾಟಗಾರರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಸಿದ್ಧಾರೂಢರ ಭಕ್ತರಿಗೆ ಹಾಗೂ ಟ್ರಸ್ಟ್ ಕಮೀಟಿಗೆ ಇದು ಬಹಳ ಸಂತೋಷದ ಕ್ಷಣ. ಈ ಮಹತ್ಕಾರ್ಯಕ್ಕೆ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಸುರೇಶ ಅಂಗಡಿ, ಪ್ರಲ್ಹಾದ ಜೋಶಿ, ಈ ಕಾರ್ಯದಲ್ಲಿ ಪರೋಕ್ಷ ಮತ್ತು ಅಪರೋಕ್ಷವಾಗಿ ಸೇವೆ ಸಲ್ಲಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಶ್ರೀಮಠದ ಸಂಪ್ರದಾಯದ ಎಲ್ಲ ಸ್ವಾಮಿಜಿಯವರಿಗೆ ಹಾಗೂ ಅಧಿಕಾರಿಗಳಿಗೆ, ಭಕ್ತರಿಗೆ ಮಠದ ಟ್ರಸ್ಟ್ ಕಮಿಟಿ ವತಿಯಿಂದ ಧನ್ಯವಾದ ಸಲ್ಲಿಸಲಾಗಿದೆ. ಟ್ರಸ್ಟ್ ಚೇರ್ಮನ್ ಡಿ.ಡಿ. ಮಾಳಗಿ, ಗೌರವ ಕಾರ್ಯದರ್ಶಿ ಸಿದ್ರಾಮಪ್ಪ ಕೋಳಕೂರ ಸೇರಿ ಎಲ್ಲ ಧರ್ಮದರ್ಶಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸ್ವಾಗತ:

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದನ್ನು ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವಕ್ತಾರ ರವಿ ನಾಯ್ಕ ಸ್ವಾಗತಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢಸ್ವಾಮಿಜಿ ಹೆಸರನ್ನು ಇಡಲು ನಾವೂ ಸೇರಿ ಅನೇಕ ಭಕ್ತರು ಒತ್ತಾಯಿಸಿದ್ದೇವು. ಆದರೆ, ಈಗ ರೈಲು ನಿಲ್ದಾಣಕ್ಕೆ ಸ್ವಾಮೀಜಿ ಹೆಸರಿಡುತ್ತಿರುವುದು ಒಳ್ಳೆಯ ಸಂಗತಿ ಎಂದು ರವಿ ನಾಯ್ಕ ತಿಳಿಸಿದ್ದಾರೆ.

ಜೆಡಿಎಸ್: ರೈಲು ನಿಲ್ದಾಣಕ್ಕೆ ಅದ್ವೈತ ಸಾಮ್ರಾಟ ಗುರುವಿನ ನಾಮಕರಣ ಖಾತ್ರಿಯಾಗಿರುವುದಕ್ಕೆ ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಇತರರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ.

ಕೆಸಿಸಿಐ ಸಂತಸ

ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕೂಡ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯ ಸ್ಥಾಪನೆಗೊಂಡ ನಂತರ ಸತತವಾಗಿ ಈ ಬೇಡಿಕೆ ಮುಂದಿಟ್ಟು ಒತ್ತಾಯಿಸುತ್ತ ಬಂದಿತ್ತು. ಅನೇಕ ದಿನಗಳ ಬೇಡಿಕೆ ಇದೀಗ ಈಡೇರಿದ್ದು,

ಇದಕ್ಕಾಗಿ ಪ್ರಯತ್ನಿಸಿದ ಕೇಂದ್ರ ಹಾಗೂ ರಾಜ್ಯದ ಸಚಿವರಿಗೆ ಸಂಸ್ಥೆ ಅಭಿನಂದಿಸಿದೆ. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿ ಅಶೋಕ ಗಡಾದ, ಜೊತೆ ಗೌರವ ಕಾರ್ಯದರ್ಶಿ ಉಮೇಶ ಗಡ್ಡದ ಹಾಗೂ ಝೆಡ್​ಆರ್​ಯುುಸಿಸಿ ಸದಸ್ಯ ಜಿ.ಕೆ. ಅದಪ್ಪಗೌಡರ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net