ಹುಬ್ಬಳ್ಳಿ-ಧಾರವಾಡ ನೀರು ಪೂರೈಕೆ ಪುನಃ ಜಲಮಂಡಳಿಗೆ ವಹಿಸಿ

ACB hubballi
Published on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೀರು ಪೂರೈಕೆ ವ್ಯವಸ್ಥೆಯನ್ನು ಮರಳಿ ಕರ್ನಾಟಕ ಜಲ ಮಂಡಳಿಗೆ ವಹಿಸಬೇಕು ಎಂದು ಭ್ರಷ್ಟಾಚಾರ ನಿಮೂಲನೆ ಹಾಗೂ ಮಾನವ ಹಕ್ಕುಗಳ ವಿಂಗ್ ಸಂಸ್ಥಾಪಕ ಅಧ್ಯಕ್ಷೆ ವಿಜಯಲಕ್ಷ್ಮೀ ಧಾರವಾಡಕರ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆಯೇ ಅವಳಿ ನಗರದ ನೀರು ಪೂರೈಕೆ ವ್ಯವಸ್ಥೆಯನ್ನು ಎಲ್ ಆಂಡ್ ಟಿ ಕಂಪನಿಗೆ ವಹಿಸಲಾಗಿದ್ದರೂ ಅವರು ತಮ್ಮ ಬಳಿ ಸಿಬ್ಬಂದಿ ಇಲ್ಲ ಎನ್ನುತ್ತಿದ್ದಾರೆ. ನಿಯಮಿತವಾಗಿ ನೀರಿನ ಬಿಲ್ ವಿತರಿಸುತ್ತಿಲ್ಲ. ಬಿಲ್ ವಿತರಣೆ ಮಾಡದಿರುವ ಬಗ್ಗೆ ಸಿಬ್ಬಂದಿಯಲ್ಲಿ ಕೇಳಿದರೆ, ನಮಗೆ ಎಲ್ ಆಂಡ್ ಟಿ ನವರು ಸಂಬಳ ನೀಡಿಲ್ಲವೆಂದು ಹೇಳುತ್ತಿದ್ದಾರೆ ಎಂದರು.

ವಿಂಗ್​ನ ಧಾರವಾಡ ಜಿಲ್ಲಾಧ್ಯಕ್ಷ ಚಂದನ ದಳವಿ ಮಾತನಾಡಿ, ಹಳೇ ಹುಬ್ಬಳ್ಳಿ ನೇಕಾರನಗರ ಸುತ್ತಮುತ್ತ ಪ್ರತಿ 10-12 ದಿನಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಕಲುಷಿತ ನೀರು ಪೂರೈಕೆಯಿಂದಲೂ ಆರೋಗ್ಯ ಹದಗೆಟ್ಟಿದೆ. ಚರ್ಮ ಸಂಬಂಧಿ ರೋಗಗಳು ಕಾಣಿಸಿಕೊಂಡಿವೆ. ಅವಳಿ ನಗರದ ನೀರು ಪೂರೈಕೆ ವ್ಯವಸ್ಥೆ ಹಾಳಾದರೂ ಎಲ್ ಆಂಡ್ ಟಿ ವಿರುದ್ಧ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ರಕ್ಷಿತಾ ಆರ್.ಡಿ., ಪರಶುರಾಮ ಜಡಿ, ಮೆಹಬೂಬ ದಾಂಡೆವಾಲೆ, ಸಮರ್ಥ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net