ಹುಬ್ಬಳ್ಳಿ- ಧಾರವಾಡ ನಿಶ್ಯಬ್ಧ

h24-Rayanna Circle 1
Published on

ಹುಬ್ಬಳ್ಳಿ: ರಂಜಾನ್ ಹಬ್ಬದ ಮುನ್ನಾದಿನ ಅಂದರೆ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಜನಜಾತ್ರೆಯೇ ನೆರೆಯುತ್ತಿತ್ತು. ಹಗಲಲ್ಲಿ ಮಾತ್ರವಲ್ಲ; ರಾತ್ರಿಯಿಡೀ ಖರೀದಿ ಹಬ್ಬ ನಡೆಯುತ್ತಿತ್ತು. ಆದರೆ, ಈ ಬಾರಿ ಮಾತ್ರ ಭಾನುವಾರ ತದ್ವಿರುದ್ಧ ಪರಿಸ್ಥಿತಿ ಕಂಡುಬಂತು. ಇದಕ್ಕೆ ಕಾರಣ- ಕರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ಘೊಷಿಸಿದ ಕರ್ಫ್ಯೂ.

ಭಾನುವಾರದ ಕರ್ಫ್ಯೂ ಆದೇಶಕ್ಕೆ ಹುಬ್ಬಳ್ಳಿಯ ಸಾರ್ವ ಜನಿಕರು ಅದ್ಭುತ ರೀತಿಯಲ್ಲಿ ಸ್ಪಂದಿಸಿದರು. ಶನಿವಾರ ರಾತ್ರಿಯಿಂದಲೇ ಕರ್ಫ್ಯೂ ಜಾರಿಯಾಗಿದ್ದು, ಭಾನುವಾರ ಅಂಗಡಿ- ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಹೋಟೆಲ್​ಗಳು ಪಾರ್ಸ್​ಲ್ ಸೇವೆ ಯನ್ನೂ ನೀಡುತ್ತಿರಲಿಲ್ಲ. ಔಷಧ ಹಾಗೂ ಅಗತ್ಯ ವಸ್ತುಗಳು ಜನರಿಗೆ ಲಭಿಸುತ್ತಿದ್ದವು. ಇವು ಹೊರತುಪಡಿಸಿದರೆ ಎಲ್ಲವೂ ಸ್ತಬ್ಧಗೊಂಡಿದ್ದವು. ಬಹುತೇಕ ರಸ್ತೆಗಳು ವಾಹನ ಹಾಗೂ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದ್ದವು. ನಗರದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೇ ಹುಬ್ಬಳ್ಳಿ, ದೇಶಪಾಂಡೆ ನಗರ, ಕಾರವಾರ ರಸ್ತೆ, ಇಂಡಿಪಂಪ್ ಸೇರಿ ಬಹುತೇಕ ಕಡೆ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಆಗಾಗ ವಾಹನ ಬಂದರೂ ಅವುಗಳ ಮಾಹಿತಿ ಪಡೆಯುತ್ತಿದ್ದ ಪೊಲೀಸರು, ಆಸ್ಪತ್ರೆ, ಮಾಧ್ಯಮ, ಇತರೆ ಅಗತ್ಯ ಮತ್ತು ತುರ್ತು ಸೇವೆಗಳಿದ್ದರೆ ಮಾತ್ರ ಬಿಟ್ಟು ಕಳುಹಿಸುತ್ತಿದ್ದರು. ಮುಂಜಾಗ್ರತೆ ಅರಿತಿದ್ದ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಅಗತ್ಯ ವಸ್ತುಗಳ ಖರೀದಿಗೆ ಹೊರ ಬರುತ್ತಿದ್ದರು. ಹೊರಬಂದ ಜನರಿಗೆ ಪೊಲೀಸರು ತಿಳಿ ಹೇಳುವುದಲ್ಲದೇ, ವಾದ ಮಾಡಿದರೆ ಬೆತ್ತದ ರುಚಿ ತೋರಿಸಿ ಕಳುಹಿಸುತ್ತಿದ್ದರು.

ಒಳ ಪ್ರದೇಶಗಳಲ್ಲಿ ಗುಂಪು: ಮುಖ್ಯ ರಸ್ತೆಗಳಲ್ಲಿ ಜನರು ಹೊರಬರುತ್ತಿರಲಿಲ್ಲ. ಆದರೆ, ಅರವಿಂದ ನಗರ, ಕೌಲ್​ಪೇಟೆ, ಅಯೋಧ್ಯಾನಗರ, ಶ್ರೀನಗರದಲ್ಲಿ ಜನರ ಓಡಾಟ ಅಬಾಧಿತವಾಗಿತ್ತು. ದಿನಸಿ, ತರಕಾರಿ ಖರೀದಿಗೆ ಹೊರ ಬರುತ್ತಿದ್ದರು. ಯುವಕರು ಗುಂಪು ಗುಂಪಾಗಿ ನಿಂತು ರ್ಚಚಿಸುತ್ತಿದ್ದರು. ವೃದ್ಧರು ಒಂದೆಡೆ ಕುಳಿತು ಮಾತನಾಡುತ್ತಿರುವುದು ಕಂಡುಬಂತು. ಈ ಭಾಗದಲ್ಲಿ ಪೊಲೀಸರ ಓಡಾಟ ಇಲ್ಲದೇ ಇರುವುದರಿಂದ ಜನರಿಗೆ ಯಾವುದೇ ಭಯ ಇರಲಿಲ್ಲ.

ನೀರು ಪೂರೈಕೆ: ಕರ್ಫ್ಯೂ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಕೆಲ ಯುವಕರು ನೀರು ಪೂರೈಕೆ ಮಾಡುತ್ತಿದ್ದರು. ಯಾವುದೇ ಫಲಾಪೇಕ್ಷೆ ಇಲ್ಲದೇ ಹೆಸರೂ ಹೇಳದೇ ನೀರು ಕೊಟ್ಟು ಬೈಕ್ ಮೇಲೆ ಕುಳಿತು ಬುರ್ರ್ ಅಂತ ಹೊರಟುಬಿಡುತ್ತಿದ್ದರು. ಕರೊನಾ ತಡೆಗಾಗಿ ಶ್ರಮಿಸುತ್ತಿರುವವರಿಗೆ ತಾವು ಸಣ್ಣ ಸೇವೆ ಮಾಡುತ್ತಿದ್ದೇವೆ ಎಂಬ ಸಹಜ ಧನ್ಯತೆ ಅವರ ಮುಖದಲ್ಲಿತ್ತು.

ಕ್ರೂಷರ್ ಪರಿಶೀಲನೆ: ತಾಲೂಕಿನ ಮಲ್ಲಿಗವಾಡದ ಇನಾಮತಿ ಕುಟುಂಬದವರ ಮದುವೆ ಸಮಾರಂಭ ನಗರದ ಬಾಫಣಾ ಲೇಔಟ್​ನಲ್ಲಿ (ವರನ ಸೃಗ್ರಹ) ಭಾನುವಾರ ಏರ್ಪಾಟಾಗಿತ್ತು. ಕ್ರೂಷರ್​ನಲ್ಲಿ ಜನ ಆಗಮಿಸಿದ್ದರು. ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಡೆದ ಪೊಲೀಸರು, ಇಷ್ಟು ಜನರನ್ನು ಹೊತ್ತು ತರುವುದು ಒಳಿತಲ್ಲ. ಪಾಸ್ ಏನದರೂ ಇದೆಯೆ? ಎಂದು ಪ್ರಶ್ನಿಸಿದರು. ಹೀಗೆಲ್ಲ ಮಾಡಕೂಡದು ಎಂದು ಪೊಲೀಸರು ತಿಳಿ ಹೇಳಿ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net