

ಹುಬ್ಬಳ್ಳಿ: ಆಗಸ್ಟ್ 7ರಿಂದ ಆರಂಭವಾಗಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಮಹಾರಾಜ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ವೇಗದ ಬೌಲರ್ ಅಭಿಮನ್ಯ ಮಿಥುನ್ ನಾಯಕರಾಗಿದ್ದಾರೆ.
ಗುರುವಾರ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಮಹಾರಾಜ ಟ್ರೋಫಿ ಅನಾವರಣಗೊಳಿಸಿದ ಕೆಎಸ್ಸಿಎ ಕಾರ್ಯದರ್ಶಿ ಸಂತೋಷ ಮೆನನ್ ಈ ವಿಷಯ ಪ್ರಕಟಿಸಿದರು.
ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿ ಲವನಿತ್ ಸಿಸೋಡಿಯಾ, ಕೌಶಿಕ್ ವಿ, ಲಿಯಾನ್ ಖಾನ್, ನವೀನ ಎಂ.ಜಿ., ಅನಂದ ದೊಡ್ಡಮನಿ, ಶಿವಕುಮಾರ ಬಿ., ತುಷಾರ ಸಿಂಗ್, ಅಕ್ಷಯ ರಾವ್, ಜಹೂರ್ ಫರೂಕಿ, ರೋಹನ ನವೀನ, ಸೌರವ ಶ್ರೀವಾಸ್ತವ, ಸಾಗರ ಸೋಲಂಕಿ, ಗೌತಮ ಸಾಗರ, ರೋಶನ ಎ., ರಾಹುಲ ಸಿಂಗ್ ರಾವತ, ಶಿಶಿರ ಭವಾನೆ, ಶರಣಗೌಡ, ನಿರ್ವಿುತ ಶಶಿಧರ, ಸ್ವಪ್ನಿಲ ಯಳವೆ ಇದ್ದಾರೆ. ದೀಪಕ ಚೌಗಲೆ ಕೋಚ್, ರಾಜ ಭಟ್ಕಳ ಸಹಾಯಕ ಕೋಚ್, ಆನಂದ ಕಟ್ಟಿ ಆಯ್ಕೆಗಾರರು, ಶಶಿಕುಮಾರ ವಿಡಿಯೋ ಎನಾಲಿಸ್ಟ್ ಆಗಿದ್ದಾರೆ. ಜಿಂದಾಲ್ ಸ್ಟೀಲ್ಸ್ ತಂಡದ ಪ್ರಾಯೋಜಕತ್ವ ವಹಿಸಿದೆ ಎಂದರು.
ಈ ಹಿಂದಿನ ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ನ ಸ್ವರೂಪವನ್ನು ಬದಲಾಯಿಸಿ ಈ ಬಾರಿ ಮಹಾರಾಜ ಟ್ರೋಫಿ ನಡೆಸಲಾಗುತ್ತಿದೆ. ಫ್ರಾಂಚೈಸಿ ಮಾದರಿಯನ್ನು ಕೈ ಬಿಡಲಾಗಿದೆ. ಒಂದೊಂದು ತಂಡಕ್ಕೆ ಪ್ರಾಯೋಜಕರು ಇದ್ದು, ಅವರು ವಾಣಿಜ್ಯ ವಹಿವಾಟಿಗೆ ಮಾತ್ರ ಸೀಮಿತವಾಗಿರಲಿದ್ದಾರೆ. ಯಾವುದೇ ಕ್ರಿಕೆಟ್ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗಸ್ಟ್ 7ರಿಂದ 26ರವರೆಗೆ ಮೈಸೂರು, ಬೆಂಗಳೂರಿನಲ್ಲಿ ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ. 6 ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.