

ಹುಬ್ಬಳ್ಳಿ: ‘ಹುಬ್ಬಳ್ಳಿ ಗಿಚ್ ಐತಿ’ ಹಿಪಾಪ್ ಶೈಲಿಯ ವಿಡಿಯೋ ಸಾಂಗ್ ಮಾ. 5ರಂದು ಬೆಳಗ್ಗೆ 10 ಗಂಟೆಗೆ ಗೋಕುಲ ರಸ್ತೆಯ ಕೆಎಲ್ಇ ಐಟಿ ಕಾಲೇಜು ಕ್ಯಾಂಪಸ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಆರ್ಜೆ ಮಾಹಿ (ಮಹೇಶ ಸುಭಾಷ ನೇತ್ರೇಕರ) ತಿಳಿಸಿದರು.
ಗುರುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಕನ್ನಡ ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ‘ಹುಬ್ಬಳ್ಳಿ ಗಿಚ್ ಐತಿ’ ವಿಡಿಯೋ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ಉತ್ತರ ಕರ್ನಾಟಕದ ಪ್ರಥಮ ರೇಡಿಯೋ ಜಾಕಿ ಆಗಿ ನಾನು 2018ರ ಸೆ. 24ರಂದು ಬೆಳಗ್ಗೆ 9.35ಕ್ಕೆ ಮೊದಲು ಹೇಳಿದ ಪದ ‘ಹುಬ್ಬಳ್ಳಿ ಗಿಚ್ ಐತಿ ನಮ್ ಮಂದ್ಯಾಗ ಕಿಚ್ ಐತಿ’. ಅಂದು ಹೇಳಿದ ಮಾತು ಇದೀಗ ವಿಡಿಯೋ ಸಾಂಗ್ ಆಗಿ ಅಲೆ ಎಬ್ಬಿಸಲು ಸಜ್ಜಾಗಿದೆ ಎಂದರು.
ಈ ಮಾತು ಜನರ ಹೃದಯದಾಳದಲ್ಲಿ ಅಚ್ಚಳಿಯದೆ ಉಳಿದಿದೆ. ಇದನ್ನು ಜನ ಎಂದಿಗೂ ಮರೆಯಬಾರದು ಎಂಬ ಉದ್ದೇಶದಿಂದ ಸಂಗೀತ ರೂಪಕ್ಕೆ ತಂದಿದ್ದೇವೆ. ನಾನೇ ಸಾಹಿತ್ಯ ಬರೆದು, ಸಂಯೋಜಿಸಿ, ಹಾಡಿ, ನಿರ್ದೇಶಿಸಿರುವ ‘ಹುಬ್ಬಳ್ಳಿ ಗಿಚ್ ಐತಿ’ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಪ್ರಮೋದ ಸೀಫನ್ ಸಂಗೀತ ನೀಡಿದ್ದಾರೆ. ವಿನಾಯಕ ಬಾಕಳೆ ಹಾಗೂ ವಿಜಯ ಬಾಕಳೆ ವಿಡಿಯೋ ಎಡಿಟಿಂಗ್ ಮಾಡಿದ್ದಾರೆ ಎಂದರು.
ಹಾಡಿನ ವಿಶೇಷತೆ ಏನು ?: ಹುಬ್ಬಳ್ಳಿ ಗಿಚ್ ಐತಿ ಹಾಡಿನಲ್ಲಿ ಹುಬ್ಬಳ್ಳಿಯ ವಿಶೇಷತೆ ಹಾಗೂ ಸಾಧಕರನ್ನು ತೋರಿಸಲಾಗಿದೆ. ಇಲ್ಲಿಯ ಖಾದಿ ಗ್ರಾಮೋದ್ಯೋಗ, ಶ್ರೀ ಸಿದ್ಧಾರೂಢ ಮಠ, ಚಂದ್ರಮೌಳೇಶ್ವರ ದೇವಸ್ಥಾನ, ಉಣಕಲ್ ಕೆರೆ, ಶಿರೂರ ಪಾರ್ಕ್, ಭರತನಾಟ್ಯ, ಮಿರ್ಚಿ ಮಂಡಕ್ಕಿ, ಸಾವಜಿ ಊಟ… ಹೀಗೆ ಸ್ಥಳೀಯ ವಿಶೇಷತೆಗಳನ್ನು ಬಿಂಬಿಸಲಾಗಿದೆ. ಹುಬ್ಬಳ್ಳಿಯ ಸಾಧಕರಾದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ಎಂಡಿ ಆನಂದ ಸಂಕೇಶ್ವರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಅರವಿಂದ ಬೆಲ್ಲದ, ಯೋಗ ಗುರು ಭವರಲಾಲ ಆರ್ಯ, ಮರಿ ಗಾನ ಕೋಗಿಲೆ ಮಹನ್ಯಾ ಪಾಟೀಲ, ಕ್ರೀಡಾಪಟುಗಳಾದ ಜ್ಯೋತಿ ಸಣ್ಣಕ್ಕಿ, ಓಜಲ್ ನಲವಡಿ, ‘ನನ್ನ ಗೆಳತಿ..’ ಹಾಡಿನ ಖ್ಯಾತಿಯ ಗಾಯಕ ಮಂಜುನಾಥ ಸಂಗಳದ ಮತ್ತಿತರ ಸಾಧಕರನ್ನು ತೋರಿಸಲಾಗಿದೆ.
ಸಾಧಕರಿಗೆ ಸನ್ಮಾನ: ಮಾ. 5ರಂದು ಬೆಳಗ್ಗೆ 10 ಗಂಟೆಗೆ ಗೋಕುಲ ರಸ್ತೆಯ ಕೆಎಲ್ಇ ಐಟಿ ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿ ಗಿಚ್ ಐತಿ ವಿಡಿಯೋ ಗೀತೆಯನ್ನು ಶಾಸಕ ಅರವಿಂದ ಬೆಲ್ಲದ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ 10 ಸಾಧಕರನ್ನು ಸನ್ಮಾನಿಸಲಾಗುವುದು. ಯುವ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುವುದು. ಪ್ರತಿ ವರ್ಷ ಇದನ್ನು ಉತ್ಸವ ರೂಪದಲ್ಲಿ ಆಚರಿಸಲಾಗುವುದು ಎಂದು ಆರ್.ಜೆ. ಮಾಹಿ ತಿಳಿಸಿದರು.
ಯೂ ಟ್ಯೂಬ್ನಲ್ಲಿ ಬಿಡುಗಡೆ: ಪ್ರಸಿದ್ಧ ಆಡಿಯೋ ಸಂಸ್ಥೆ ಅಶ್ವಿನಿ ರೆಕಾರ್ಡಿಂಗ್ ಕಂಪನಿ (ಎಆರ್ಸಿ) ಹುಬ್ಬಳ್ಳಿ ಗಿಚ್ ಐತಿ ಗೀತೆಯ ಲೇಬಲ್ ಪಡೆದಿದ್ದು, ಪ್ರಮೋಶನ್ ಜವಾಬ್ದಾರಿ ಹೊತ್ತಿದೆ. ಮಾ. 5ರಂದು ಬೆಳಗ್ಗೆ 11 ಗಂಟೆ 6 ನಿಮಿಷಕ್ಕೆ ಎಆರ್ಸಿ ಯೂ ಟ್ಯೂಬ್ ಚಾನೆಲ್ನಲ್ಲಿ ಈ ಗೀತೆಯನ್ನು ಬಿಡುಗಡೆ ಮಾಡಲಿದೆ.