

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಅಲಂಕೃತ ಮಂಟಪದಲ್ಲಿ ವಿರಾಜಮಾನನಾದ ಶ್ರೀಗಣೇಶ, ಕಣ್ಣು ಕೋರೈಸುವ ದೀಪಾಲಂಕಾರ, ಡಿಜೆ ಅಬ್ಬರ, ಸಂಭ್ರಮದ ವಾತಾವರಣದ ನಡುವೆ ಭಕ್ತರ ಹಷೋದ್ಗಾರ, ನೃತ್ಯ, ಬಾನಲ್ಲಿ ಪಟಾಕಿಗಳ ಚಿತ್ತಾರ, ಮೊಳಗಿದ ಗಣಪತಿ ಬಪ್ಪಾ ಮೋರಯಾ ಜಯಘೋಷಗಳು....
ಹತ್ತು ದಿನಗಳ ಕಾಲ ನಗರದ ವಿವಿಧ ರಸ್ತೆ, ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಗಳನ್ನು ಶುಕ್ರವಾರ ಸಾಮೂಹಿಕ ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಣೆ ಮಾಡಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯವರು ತಾವು ಪ್ರತಿಷ್ಠಾಪಿಸಿದ್ದ ಬೃಹತ್ ಗಣೇಶ ಮೂರ್ತಿಗಳನ್ನು ಶುಕ್ರವಾರ ಸಂಜೆ 4 ಗಂಟೆ ವೇಳೆಗೆ ವಿಶೇಷ ಪೂಜೆ, ಆರತಿ ಸಲ್ಲಿಸುವ ಮೂಲಕ ಮೆರವಣಿಗೆಯಲ್ಲಿ ಕರೆತಂದು ವಿಸರ್ಜನೆ ಮಾಡಿದರು. ದಾರಿಯುದ್ದಕ್ಕೂ ವಿಸರ್ಜನಾ ಮೆರವಣಿಗೆ ಭವ್ಯವಾಗಿ ಗೋಚರಿಸಿತು.
ಯುವಕರು, ಮಹಿಳೆಯರು, ವಯೋವೃದ್ಧರು ಎನ್ನದೇ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಗಣಪತಿ ಮಹಾರಾಜ ಕಿ ಜೈ ಘೋಷಣೆಗಳನ್ನು ಕೂಗಿದರು. ಪರಸ್ಪರ ಗುಲಾಲು ಎರಚಿ ಸಂಭ್ರಮಿಸಿದರು.
ಶ್ರೀಗಣೇಶ ಮೆರವಣಿಗೆ ಮನೆ ಮುಂದೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ನೈವೇದ್ಯ ಸಮರ್ಪಿಸಿದರು.
ಬ್ಯಾಂಡ್ ಮೇಳ, ಸಂಬಾಳ, ಝುಾಂಜ್, ಭಜನಾ ತಂಡ, ಜಾನಪದ ಕಲಾ ತಂಡಗಳು, ಗೊಂಬೆ ಕುಣಿತ, ವೀರಗಾಸೆ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಮೆರವಣಿಗೆಯು ದುರ್ಗದ ಬೈಲ್ನಿಂದ ಪ್ರಾರಂಭವಾಗಿ ಬ್ರಾಡವೇ, ಮೇದಾರ ಓಣಿ, ದಾಜಿಬಾನ ಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಬಸವ ವನ ಮುಖಾಂತರ ಇಂದಿರಾ ಗಾಜಿನ ಮನೆ ಆವರಣದಲ್ಲಿ ಇರುವ ಬಾವಿ ಹಾಗೂ ಹೊಸೂರಿನಲ್ಲಿ ಇರುವ ಬಾವಿಯಲ್ಲಿ ವಿಗ್ರಹಗಳ ವಿಸರ್ಜನೆ ಮಾಡಲಾಯಿತು.
ಮೆರವಣಿಗೆ ಉದ್ಘಾಟನೆ:
ದುರ್ಗದ ಬೈಲ್ನಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಏರ್ಪಡಿಸಿದ್ದ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆಯ ಉದ್ಘಾಟನೆ ಸಮಾರಂಭವನ್ನು ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಸಂಸ್ಕೃತಿ, ಧರ್ಮ, ಭಕ್ತಿ ಭಾವವನ್ನು ಪ್ರಜ್ವಲಿಸುವ ಶ್ರೀ ಗಣೇಶೋತ್ಸವವು ಒಕ್ಕಟ್ಟು, ಸಹೋದರತ್ವ ಮನೋಭಾವ ಬೆಳೆಸುವ ಹಬ್ಬವಾಗಿದೆ. ವರ್ಷಗಳ ನಂತರ ಮತ್ತೆ ಹುಬ್ಬಳ್ಳಿ ಗಣೇಶೋತ್ಸವಕ್ಕೆ ಮೆರಗು ಬಂದಿದೆ. ಈ ಸಂಭ್ರಮ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವವು ಮೈಸೂರಿನ ದಸರಾ ಉತ್ಸವ ರೀತಿಯಲ್ಲಿ ಮೆರಗು ಹೆಚ್ಚಿಸಿಕೊಳ್ಳುತ್ತಿದೆ. ಭಾವೈಕ್ಯತೆಯ ಸಂದೇಶ ಸಾರುತ್ತಿದೆ. ಇದರೊಂದಿಗೆ ಧಾರ್ವಿುಕ ಮನೋಭಾವ ಬೆಳೆಸುತ್ತಿದೆ. ಹುಬ್ಬಳ್ಳಿಯ ಹೆಸರು ದೇಶವ್ಯಾಪಿ ಹರಡುವಂತೆ ಮಾಡಿದೆ. ಕರೊನಾ ನಂತರ ಉತ್ಸವದ ಗತವೈಭವ ಮರುಕಳಿಸಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಈ ಹಬ್ಬವು ಮಾನವೀಯ ಮೌಲ್ಯ ಬೆಳೆಸುವ ಉತ್ಸವವಾಗಿದೆ ಎಂದರು.
ಶಾಂತರಾಜ ಪೋಳ, ರಾಘವೇಂದ್ರ ಮುರಗೋಡ, ಅಲ್ತಾಫ್ ಕಿತ್ತೂರ, ಎಸ್.ಎಸ್. ಕಮಡೊಳ್ಳಿಶೆಟ್ಟರ, ಅನಿಲ ಕವಿಶೆಟ್ಟಿ, ಈರಣ್ಣ ಪಾಳೇದ, ಅಶೋಕ ಬೆಳ್ಳಿಗಟ್ಟಿ, ಎಸ್.ಎಂ. ಅಂಗಡಿ, ಅನಿಲ ಬೇವಿನಕಟ್ಟಿ, ಸರಸ್ವತಿ ಮೆಹರವಾಡೆ, ಅಕ್ಕಮ್ಮ ಕಂಬಳಿ, ರೂಪಾ ಅಂಗಡಿ, ಡಾ. ಮಂಜುಳಾ ಕಮ್ಮಾರ, ಎಂ.ಎಂ. ಡಂಬಳ, ಐ.ಎಫ್. ನಾಯ್ಕರ, ಸಿ.ಪಿ. ಉಗರಗೋಳ, ಸುನೀಲ ಇರಕಲ್ಲ, ಮಹೇಶ ಗೌಳಿ, ಬಾಬಣ್ಣ ಪವಾರ, ವಾಮನ ಕವಳೇಕರ, ಪಾಲ್ಗೊಂಡಿದ್ದರು.
ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಪ್ರಾಸ್ತಾವಿಕ ಮಾತನಾಡಿದರು. ದುರ್ಗದಬೈಲ್ ಗಣೇಶೋತ್ಸವ ಮಂಡಳಿಯ ರವಿ ರೇವಣಕರ ಸ್ವಾಗತಿಸಿದರು. ಅಮರೇಶ ಹಿಪ್ಪರಗಿ ಕಾರ್ಯಕ್ರಮ ನಿರೂಪಿಸಿದರು.
ಪೊಲೀಸ್ ಬಂದೋಬಸ್ತ್:
ಗಣೇಶ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು. ಮೆರವಣಿಗೆಯ ಮಾರ್ಗದುದ್ದಕ್ಕೂ ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಸರ್ಜನೆ ಬಾವಿಗಳ ಬಳಿಯಲ್ಲಿಯೂ ನೂರಾರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.