ಹುಬ್ಬಳ್ಳಿ, ಖತರ್ನಾಕ್ ಸುಲಿಗೆಕೋರರ ಸೆರೆ

H14 Mobile Kallaru
Published on

ಹುಬ್ಬಳ್ಳಿ: ಒಎಲ್​ಎಕ್ಸ್ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಭೇಟಿಯಾಗಿ, ದಿಢೀರನೆ ಎರಗಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನು ಎಪಿಎಂಸಿ- ನವನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಇಲ್ಲಿನ ಕೇಶ್ವಾಪುರ ಪಾಟೀಲ ಚಾಳ ನಿವಾಸಿ ಆಕಾಶ ಮುರಳೀಧರ ಮುದಲಿಯಾರ್ (20) ಹಾಗೂ ವಿದ್ಯಾನಗರ ಶೆಟ್ಟರ್ ಲೇಔಟ್​ನ ಆಕಾಶ ಮಾರುತಿ ಮೂಳೆ (20) ಬಂಧಿತರು. ಅವರಿಂದ 3,86,496 ರೂ. ಮೌಲ್ಯದ 8 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವಾರ ಇಲ್ಲಿನ ಗಾಮನಗಟ್ಟಿ ಕರಿಯಮ್ಮದೇವಿ ದೇವಸ್ಥಾನ ಹಾಗೂ ಎಪಿಎಂಸಿ ಗೇಟ್ ಬಳಿ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದವು. ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.

ಡಿಸಿಪಿ ಬಿ.ಆರ್. ಬಸರಗಿ ಹಾಗೂ ಎಸಿಪಿ ಶಂಕರ ರಾಗಿ ಮಾರ್ಗದರ್ಶನದಲ್ಲಿ ಎಪಿಎಂಸಿ- ನವನಗರ ಠಾಣೆ ಇನ್​ಸ್ಪೆಕ್ಟರ್ ಪ್ರಭು ಸೂರಿನ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಎಎಸ್​ಐ ಎಂ.ಎಚ್. ಶಿವರಾಜ, ಸಿಬ್ಬಂದಿಯಾದ ಪ್ರಕಾಶ ಸೋಗಿ, ಎಂ.ಜೆ. ರಕ್ಕಸಗಿ, ಎನ್.ಎಂ. ಗುಡಿಮನಿ, ಎಂ.ಎಸ್. ಚಿಕ್ಕಮಠ, ಆರ್.ಕೆ. ಬಡಂಕರ, ಕೆ.ಕೆ. ಕಾರಬಾರಿ, ಎಸ್.ಎಂ. ದಿಡ್ಡಿ, ಬಿ.ಎನ್. ರಾಠೋಡ, ಆರ್.ಎಸ್. ಗೋಮಪ್ಪನವರ ತಂಡದಲ್ಲಿದ್ದರು. ಈ ತಂಡಕ್ಕೆ ಪೊಲೀಸ್ ಆಯುಕ್ತರು ಬಹುಮಾನ ಘೊಷಿಸಿದ್ದಾರೆ.

ಗದಗ ರಸ್ತೆ ನಂಟು: ಪ್ರಮುಖ ಆರೋಪಿ ಆಕಾಶ ಮುದಲಿಯಾರ್ ಈ ಹಿಂದೆ ಗದಗ ರಸ್ತೆಯಲ್ಲಿ ಬೈಕ್, ಕಾರ್ ಸವಾರರು ಹಾಗೂ ಒಂಟಿ ವ್ಯಕ್ತಿಗಳನ್ನು ಅಡ್ಡಗಟ್ಟಿ ಬೆದರಿಸಿ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಮೊಬೈಲ್, ಪರ್ಸ್, ವಾಚ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಅಂತಹ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಳಿ ನಗರದಲ್ಲಿ 8 ಪ್ರಕರಣ: ಹುಬ್ಬಳ್ಳಿಯ ಎಪಿಎಂಸಿ, ಗಾಮನಗಟ್ಟಿ, ದೇಸಾಯಿ ವೃತ್ತ, ಧಾರವಾಡದ ಎನ್​ಟಿಟಿಎಫ್, ಕೆಸಿಡಿ ವೃತ್ತ, ಮಾಳಮಡ್ಡಿ, ಬಾಗಲಕೋಟ ಪೆಟ್ರೋಲ್ ಬಂಕ್, ಸತ್ತೂರ ಉದಯಗಿರಿಯಲ್ಲಿ ಇದೇ ರೀತಿ ಸುಲಿಗೆ ಮಾಡಿದ್ದರ ಕುರಿತು ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಇಬ್ಬರ ಬಂಧನ: ಜಗಳ ಬಿಡಿಸಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಇಬ್ಬರನ್ನು ಧಾರವಾಡ ಇಲ್ಲಿನ ಶಹರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಧಾರವಾಡ ನಗರದ ಸಾಧನಕೇರಿ ನಿವಾಸಿ ನಾಗಪ್ಪ ಕರೆಪ್ಪ ಕರೆಣ್ಣವರ ಮತ್ತು ಕೆಲಗೇರಿಯ ಅರುಣಕುಮಾರ ನಾಗಪ್ಪ ಸಿಂಗಾಡಿ ಬಂಧಿತ ಆರೋಪಿಗಳು. ಕೆಲಗೇರಿಯ ಬಸವರಾಜ ಲಕ್ಷ್ಮಣ ಕೌಜಲಗಿ ಎಂಬಾತನ ಮೇಲೆ ಆರೋಪಿಗಳು ಮೇ 21ರಂದು ನಗರದ ಕಿಟೆಲ್ ಕಾಲೇಜು ಬಳಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ನಾಗಪ್ಪ ಕರೆಣ್ಣವರ ತನ್ನ ಮಾವ ಶೆಟ್ಟೆಪ್ಪ ಸುಣಗಾರನ ಜೊತೆ ನಗರದ ಕಿಟೆಲ್ ಕಾಲೇಜು ಬಳಿ ಜಗಳ ಮಾಡುತ್ತಿದ್ದ ಸಂದರ್ಭದಲ್ಲಿ ಬಸವರಾಜ ಕೌಜಲಗಿ ಬಿಡಿಸಲು ಹೋಗಿದ್ದನು. ಆಗ ನಾಗಪ್ಪ ಕರೆಣ್ಣವರ ಮತ್ತು ಅರುಣಕುಮಾರ ಸಿಂಗಾಡಿ ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಶಹರ ಠಾಣೆಯಲ್ಲಿ ಬಸವರಾಜ ಕೌಜಲಗಿ ನೀಡಿದ ದೂರಿನ ಮೇರೆಗೆ ಇನ್​ಸ್ಪೆಕ್ಟರ್ ಶ್ರೀಧರ ಸಾತಾರೆ ಅವರು ಇಬ್ಬರೂ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net