

ಹುಬ್ಬಳ್ಳಿ: ಪಕ್ಷದ ಸೂಚನೆಗೂ ಕ್ಯಾರೇ ಎನ್ನದೆ ಮೂಲ ಬಿಜೆಪಿಗರು ಹುಬ್ಬಳ್ಳಿ ಎಪಿಎಂಸಿ ಅಧ್ಯಕ್ಷ ಸ್ಥಾನ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಇಲ್ಲಿಯ ಅಮರಗೋಳ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಗುರುವಾರ ನಿಗದಿಯಾಗಿದ್ದ ಆಡಳಿತ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗ ಸದಸ್ಯರು ವಿಜಯದ ನಗೆ ಬೀರಿದ್ದಾರೆ.
ಅಧ್ಯಕ್ಷರಾಗಿ ಬೆಳಗಲಿ ಕ್ಷೇತ್ರದ ಸಹದೇವಪ್ಪ ಸುಡಕೇನವರ, ಉಪಾಧ್ಯಕ್ಷರಾಗಿ ಹಳೇಹುಬ್ಬಳ್ಳಿ ಕ್ಷೇತ್ರದ ಬಸವರಾಜ ನಾಯ್ಕರ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ತಹಸೀಲ್ದಾರ್ ಶಶಿಧರ ಮಾಡ್ಯಾಳ ಬೆಳಗ್ಗೆ 10ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭಿಸಿದರು. ಬಿಜೆಪಿ ಬೆಂಬಲಿತರಾದ ಸಹದೇವಪ್ಪ ಸುಡಕೇನವರ, ಉದಯ ದೊಡ್ಡಮನಿ ಹಾಗೂ ಬೆಳಗ್ಗೆಯಷ್ಟೇ ಬಿಜೆಪಿ ಸೇರಿದ್ದ ಸುರೇಶ ಕಿರೇಸೂರ ಸೇರಿ ಮೂವರು ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬಸವರಾಜ ನಾಯ್ಕರ ಹಾಗೂ ಪಕ್ಷೇತರರೆಂದು ಗುರುತಿಸಿಕೊಂಡಿರುವ ನೀಲವ್ವ ರಾಯನಗೌಡ್ರ ನಾಮಪತ್ರ ಸಲ್ಲಿಸಿದ್ದರು. ಎಲ್ಲ ನಾಮಪತ್ರ ಕ್ರಮಬದ್ಧವಾಗಿ ಸ್ವೀಕೃತವಾದವು.
ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನೀಲವ್ವ ವಾಪಸ್ ಪಡೆದಿದ್ದರಿಂದ ಬಸವರಾಜ ನಾಯ್ಕರ್ ಅವರನ್ನು ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಉದಯ ದೊಡ್ಡಮನಿ ಮಾತ್ರ ನಾಮಪತ್ರ ವಾಪಸ್ ಪಡೆದಿದ್ದರಿಂದ ಬಿಜೆಪಿಯವರೇ ಆದ ಸುರೇಶ ಕಿರೇಸೂರ ಹಾಗೂ ಸಹದೇವಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿತು. 2.30ಕ್ಕೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸುರೇಶ ಕಿರೇಸೂರ 6 ಮತ ಪಡೆದರೆ, ಸಹದೇವಪ್ಪ 11 ಮತಗಳನ್ನು ಪಡೆದು ವಿಜಯಶಾಲಿಯಾದರು. ಕಾಂಗ್ರೆಸ್ ಬೆಂಬಲಿತ ಸದಸ್ಯರು ಮೂಲ ಬಿಜೆಪಿಯವರಾದ ಸಹದೇವಪ್ಪ ಅವರನ್ನು ಬೆಂಬಲಿಸಿದರು.
ಚುನಾವಣೆ ಪ್ರಕ್ರಿಯೆ ನಂತರ ಮಹಾನಗರ ಜಿಲ್ಲಾಧ್ಯಕ್ಷ, ಶಾಸಕ ಅರವಿಂದ ಬೆಲ್ಲದ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ವಿಜೇತರನ್ನು ಅಭಿನಂದಿಸಿದರು.
ಬೆಳಗ್ಗೆ ಬಿಜೆಪಿ ಸೇರ್ಪಡೆ
ಪಕ್ಷೇತರರಾಗಿ ಗುರುತಿಸಿಕೊಂಡಿದ್ದ ಕೋಳಿವಾಡ ಕ್ಷೇತ್ರದ ಸುರೇಶ ಕಿರೇಸೂರ ಈ ಹಿಂದೆ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತ ಬಂದಿದ್ದು, ತಮಗೂ ಅವಕಾಶ ನೀಡಬೇಕೆಂದು ಪಕ್ಷದ ವರಿಷ್ಠರನ್ನು ಕೋರಿದ್ದರು. ಅದರಂತೆ ಗುರುವಾರ ಬೆಳಗ್ಗೆಯಷ್ಟೇ ಬಿಜೆಪಿ ಸೇರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದರು. ಇದರಿಂದ ಕೂಡಲೆ ಎಚ್ಚೆತ್ತ ಮೂಲ ಬಿಜೆಪಿಗರು ಕಾಂಗ್ರೆಸ್ ಸದಸ್ಯರನ್ನು ಸಂರ್ಪಸಿ ಬೆಂಬಲ ಪಡೆದು ಕೊನೆಗೂ ಅಧ್ಯಕ್ಷಗಿರಿ ಉಳಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುರೇಶ ಕಿರೇಸೂರ, ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಪಕ್ಷ ಸೇರಿ ಸ್ಪರ್ಧೆ ಮಾಡಿದ್ದೆ. ಆದರೆ, ಬಿಜೆಪಿಯವರು ಬಿಜೆಪಿಯವರಿಗೇ ಮೋಸ ಮಾಡಿದರು. ಈ ಹಿಂದೆ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಗೆ ಬೆಂಬಲವಾಗಿ ನಿಂತಿದ್ದ ತಮ್ಮ ವಿರುದ್ಧವೇ ಬಿಜೆಪಿಗರು ಮತ ಚಲಾಯಿಸಿದರು. ಪಕ್ಷದ ಹಿರಿಯರಿಗೂ ಗೌರವ ಕೊಡಲಿಲ್ಲ. ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷದವರು ಸೇರಿ ನನ್ನನ್ನು ಸೋಲಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಗರ ಗೌಪ್ಯ ನಡೆ
ಎಪಿಎಂಸಿ ಚುನಾವಣೆ ಮೇಲ್ನೋಟಕ್ಕೆ ಗೋಜಲು, ಗೊಂದಲಮಯವಾಗಿ ಕಂಡರೂ ಬಿಜೆಪಿ ವ್ಯವಸ್ಥಿತ ಆಟ ಆಡಿತೇ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ. ಮೂಲ ಬಿಜೆಪಿಗರ ಸ್ಪರ್ಧೆಗೆ ಅವಕಾಶ ಕೊಟ್ಟು ನಾಮಪತ್ರ ವಾಪಸ್ಗೆ ಹೆಚ್ಚು ಒತ್ತಡ ಹಾಕದೇ ಇಬ್ಬರಿಗೂ ಕಣದಲ್ಲಿರುವಂತೆ ನೋಡಿಕೊಳ್ಳುವ ಮೂಲಕ ಜಾಣ ನಡೆ ಅನುಸರಿಸಿತೇ? ಎಂಬ ಮಾತುಗಳೂ ಕೇಳಿ ಬಂದವು.
ಒಂದೆಡೆ ಮೂಲ ಬಿಜೆಪಿಗರಿಗೆ ಸ್ಥಾನಮಾನ ಎಂಬ ಸಂದೇಶ ರವಾನಿಸಿದರೆ. ಇನ್ನೊಂದೆಡೆ ಸ್ಥಾನಮಾನದ ಆಸೆ ಇಟ್ಟುಕೊಂಡು ಹೊಸದಾಗಿ ಪಕ್ಷ ಸೇರುವವರಿಗೆ ಪಾಠ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಎಪಿಎಂಸಿಯಲ್ಲಿಯ ಬಿಜೆಪಿ ಬೆಂಬಲಿತ ಸದಸ್ಯರು ಸಹ ನಮ್ಮನ್ನು ಹೇಳದೇ ಕೇಳದೇ ನಿರ್ಧಾರ ತೆಗೆದುಕೊಂಡರೆ ನಾವು ಬಾದ್ಯಸ್ಥರು ಅಲ್ಲ... ಎಂಬ ಸ್ಪಷ್ಟ ಸಂದೇಶವನ್ನು ಪಕ್ಷದ ನಾಯಕರಿಗೆ ರವಾನಿಸಿದಂತಾಗಿದೆ. ಕಾಂಗ್ರೆಸ್ ಕೂಡ ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ ಸಂತೃಪ್ತಿಯಲ್ಲಿದೆ.
10 ತಿಂಗಳಿಗೆ?: ಈ ಹಿಂದಿನಂತೆ ಸದಸ್ಯರ ಮಧ್ಯದ ಒಳ ಒಪ್ಪಂದದಂತೆ ಬಾಕಿ ಉಳಿದಿರುವ 20 ತಿಂಗಳ ಅವಧಿಯಲ್ಲಿ ಇಬ್ಬರು ಅಧ್ಯಕ್ಷರಾಗುವ ಸಾಧ್ಯತೆ ಇದೆ. ಅದೇ ರೀತಿ ಒಪ್ಪಂದದ ಮೇರೆಗೆ ಉದಯ ದೊಡಮನಿ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮತ್ತೆ 10 ತಿಂಗಳಿಗೆ ಅಧ್ಯಕ್ಷರ ಚುನಾವಣೆ ನಡೆಯುವುದು ಖಾತ್ರಿ ಎನ್ನಲಾಗುತ್ತಿದೆ.
EndFragment