ಹುಬ್ಬಳ್ಳಿ ಎಪಿಎಂಸಿಗೆ ಬಂದ ಬಳ್ಳಾರಿ ಕಾಯಿ

h18- Chilly 1
Published on

ಹುಬ್ಬಳ್ಳಿ: ನಗರದ ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ವ್ಯಾಪಾರ ಇದೀಗ ಮತ್ತೆ ಆರಂಭಿಸಲಾಗಿದೆ.

ಹುಬ್ಬಳ್ಳಿ ವರ್ತಕರ ಸಂಘದ ಮನವಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮೆಣಸಿನಕಾಯಿ ವಹಿವಾಟು ಪುನರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬೇರೆ ಜಿಲ್ಲೆಗಳಿಂದ ಅಷ್ಟೇ ಅಲ್ಲ, ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಹುಬ್ಬಳ್ಳಿ ಎಪಿಎಂಸಿಗೆ ಮೆಣಸಿನಕಾಯಿ ಬರುತ್ತಿತ್ತು. ಆಂಧ್ರದಲ್ಲಿ ಕರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಒಣಮೆಣಸಿನಕಾಯಿ ವಹಿವಾಟು ಸ್ಥಗಿತಗೊಳಿಸಲಾಗಿತ್ತು.

ಇದೀಗ ಸ್ಥಳೀಯ ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮೆಣಸಿನಕಾಯಿ ವ್ಯಾಪಾರ ಮತ್ತೆ ಆರಂಭಿಸಲು ವರ್ತಕರೂ ಒತ್ತಾಯ ಮಾಡಿದ್ದರು. ಅಷ್ಟು ಇಷ್ಟು ಬೆಳೆದ ಮೆಣಸಿನಕಾಯಿ ಮಾರಾಟ ಮಾಡಲು ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರಿಗೆ ಅವಕಾಶ ಕೊಡಬೇಕೆಂಬ ಒತ್ತಾಯ ಕೃಷಿಕರಿಂದಲೂ ಕೇಳಿ ಬಂದಿತ್ತು. ಇದೀಗ ಎಪಿಎಂಸಿ ಅಧಿಕಾರಿಗಳು ಮೆಣಸಿನಕಾಯಿ ವಹಿವಾಟು ಪುನರಾರಂಭಕ್ಕೆ ಕ್ರಮ ಕೈಗೊಂಡಿದ್ದಾರೆ. ಕಾಳು- ಕಡಿ, ಉಳ್ಳಾಗಡ್ಡಿ- ಆಲೂಗಡ್ಡೆ ವ್ಯಾಪಾರ ಎಂದಿನಂತೆ ನಡೆದಿದೆ. ಮೆಣಸಿನಕಾಯಿ ವ್ಯಾಪಾರವೂ ಆರಂಭವಾದರೆ ಸೋಮವಾರದಿಂದ ಮತ್ತೆ ಎಪಿಎಂಸಿಯಲ್ಲಿ ಇನ್ನಷ್ಟು ಜನಸಂದಣಿ ಉಂಟಾಗಲಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಸ್ಥಗಿತಗೊಂಡಿದ್ದ ಒಣಮೆಣಸಿನಕಾಯಿ ವ್ಯಾಪಾರಕ್ಕೆ ಚಾಲನೆ ನೀಡಲಾಗಿದೆ. ಆನ್​ಲೈನ್ ಟೆಂಡರ್ ನಡೆಯುವುದರಿಂದ ಸೋಮವಾರದಿಂದ ಹೆಚ್ಚಿನ ವ್ಯಾಪಾರಸ್ಥರು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು, ರೈತರಿಗೆ ಅನುಕೂಲವಾಗಲಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಣ್ಣ ತಿಳಿಸಿದ್ದಾರೆ.

ಶನಿವಾರವೇ 20 ಗಾಡಿ: ಈ ಮಧ್ಯೆ ಶನಿವಾರವೇ ಬಳ್ಳಾರಿ ಇತರೆಡೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಹುಬ್ಬಳ್ಳಿಗೆ ಬಂದಿದೆ. ಅಂದಾಜಿನ ಪ್ರಕಾರ, 20ಕ್ಕೂ ಹೆಚ್ಚು ಗಾಡಿಯಲ್ಲಿ ಬಳ್ಳಾರಿ ಭಾಗದಿಂದ ಮೆಣಸಿನಕಾಯಿ ಬಂದಿದೆ. ಕೆಲ ದಿನಗಳಿಂದ ಬೇರೆ ಜಿಲ್ಲೆಗಳಿಂದ ಬರುವ ಮೆಣಸಿನಕಾಯಿ ವ್ಯಾಪಾರದಲ್ಲಿ ಕೆಲ ವರ್ತಕರು ತೊಡಗಿಕೊಂಡಿದ್ದಾರೆ. ಸ್ಥಳೀಯ ರೈತರಿಗೆ ಮಾತ್ರ ಅವಕಾಶ ಇರಲಿಲ್ಲ ಎಂದು ಕೆಲ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ರೈತರ ಫಸಲು ಮಾರಾಟಕ್ಕೆ ಆದ್ಯತೆ ನೀಡಬೇಕು, ಉಳಿದಂತೆ ಎಲ್ಲ ಹುಟ್ಟುವಳಿಗಳ ವಹಿವಾಟಿಗೆ ಹೆಚ್ಚಿನ ಸಮಯಾವಕಾಶ ಕೊಡಬೇಕು ಎಂದು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net