

ಕೆ.ಆರ್.ಸಾಗರ: ಕೆ.ಆರ್.ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಗ್ರಂಥಪಾಲಕ ಹುದ್ದೆಗಳನ್ನು ರದ್ದುಪಡಿಸಿ ಉಪನ್ಯಾಸಕರನ್ನು ಏಕಾಏಕಿ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.
ಉನ್ನತ ಶಿಕ್ಷಣ ಇಲಾಖೆಯ ನಡೆಯನ್ನು ಖಂಡಿಸಿದ ವಿದ್ಯಾರ್ಥಿಗಳು, ಕಾಲೇಜು ಉಳಿಸಿ, ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆ ನೀಡುವ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಸಂತೆಮಾಳದ ಬಳಿ ಮಾನವ ಸರಪಳಿ ರಚಿಸಿ ಆಕ್ರೋಶ ಹೊರಹಾಕಿದರು.
ಉನ್ನತ ಶಿಕ್ಷಣ ಇಲಾಖೆ ಕೆ.ಆರ್.ಸಾಗರ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಗ್ರಂಥಪಾಲಕ ಹುದ್ದೆಗಳನ್ನು ಏಕಾಏಕಿ ರದ್ದುಪಡಿಸಿ ವೈಬ್‌ಸೈಟ್ ಮೂಲಕ ಪ್ರಕಟಣೆ ಹೊರಡಿಸಿ, ಇಲ್ಲಿನ ಕೆಲಸ ನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿರುವ ಬಿ.ಎ. ಮತ್ತು ಬಿ.ಕಾಂ ಕೋರ್ಸ್ ಮುಚ್ಚುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ವಿದ್ಯಾರ್ಥಿಗಳಿಗೆ ಬೆಂಬಲಿಸಿ ಶಿಕ್ಷಣ ಇಲಾಖೆ ಆದೇಶ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯರಾದ ನಾಗೇಂದ್ರ ಕುಮಾರ್, ಪಾಪಣ್ಣ, ರವಿಕುಮಾರ್, ವಸಂತಕುಮಾರ್, ಗ್ರಾಪಂ ಮಾಜಿ ಸದಸ್ಯ ಪ್ರಕಾಶ್, ಯೋಗೇಶ್, ವೆಂಕಟಸುಬ್ಬಯ್ಯ, ಟೈಲರ್ ನಾಗೇಶ್, ಮನು, ವೆಲ್ಡಿಂಗ್ ನಾರಾಯಣ, ವಿದ್ಯಾರ್ಥಿ ಮುಖಂಡರಾದ ಮನೋಜ ಎನ್, ಹೃತೀಕ್ ಆರ್., ಸೌಭಾಗ್ಯಾ ಆರ್., ಅನನ್ಯಾ ಇತರರಿದ್ದರು.