

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮಕ್ಕೆ ಶನಿವಾರ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೇಟಿ ನೀಡಿ, ಅಲ್ಲಿಯ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಮೈದಾನ ಪರಿಶೀಲಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಶೈಕ್ಷಣಿಕೇತರ ಚಟುವಟಿಕೆಗೆ ಮಹತ್ವ ನೀಡುತ್ತಿರುವ ಶಾಸಕರು, ಸದರಿ ಮೈದಾನದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಪರಿಶೀಲಿಸಿದ ಶಾಸಕರು, ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.
ಬಳಿಕ ತಮ್ಮ ಸಲಹೆ, ಸೂಚನೆಗಳನ್ನು ನೀಡಿ, ಮಕ್ಕಳ ಕ್ರೀಡಾ ಭವಿಷ್ಯದ ದೃಷ್ಟಿಯಿಂದ ಮೈದಾನದ ಉನ್ನತೀಕರಣ ಹಾಗೂ ಸವಲತ್ತುಗಳ ಒದಗಿಸುವುದು ತನ್ನ ಪ್ರಥಮ ಆದ್ಯತೆಯಾಗಿದ್ದು, ಮಕ್ಕಳಿಗೆ ಅನುಕೂಲ ಆಗುವಂತೆ ಎಲ್ಲ ಕಾರ್ಯಚಟುವಟಿಕೆಯನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಶಾಲಾ ಮೈದಾನವನ್ನು ಉನ್ನತೀಕರಣಗೊಳಿಸಿ, ಹಾಕಿ ಆಟಕ್ಕೆ ಮೈದಾನ ನಿರ್ಮಿಸುವುದಾಗಿ ತಿಳಿಸಿದರು. 2027ರಲ್ಲಿ ಅಜ್ಜಿಕುಟ್ಟಿರ ಕುಟುಂಬದವರು ಹಮ್ಮಿಕೊಂಡಿರುವ ಹಾಕಿ ಉತ್ಸವವನ್ನು ಇದೇ ಮೈದಾನದಲ್ಲಿ ನಡೆಸಲು ಚಿಂತಿಸುತ್ತಿರುವುದಾಗಿ ಹೇಳಿದರು. ವೈಜ್ಞಾನಿಕವಾಗಿ ಎಲ್ಲವನ್ನು ಪರಿಶೀಲಿಸಿ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಚೀಫ್ ಎಲೆಕ್ಟ್ರಿಕಲ್ ಆಫೀಸರ್ ತಿತೀರ ರೋಷನ್ ಅಪ್ಪಚ್ಚು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್, ಅಜ್ಜಿಕುಟ್ಟಿರ ಗಿರೀಶ್, ಹಿರಿಯ ಮುಖಂಡರಾದ ಚೇಕ್ಕೇರ ವಾಸು ಕುಟ್ಟಪ್ಪ, ಚೆಕ್ಕೇರ ಸುಧೀರ್, ಪಕ್ಷದ ಪ್ರಮುಖರು, ಸ್ಥಳೀಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.