

ಬೀರೂರು: ದೇಶಕ್ಕಾಗಿ ಜೀವ ಹಾಗೂ ಜೀವನ ಸಮರ್ಪಿಸಿಕೊಂಡಿರುವ ವೀರಯೋಧರ ಸ್ಮರಣೆ ನಮಗೆ ಅನಿವಾರ್ಯ ಎಂದು ಕೇಂದ್ರ ಮೀಸಲು ಪಡೆಯ ಗ್ರೂಪ್ ಸೆಂಟರ್ ಎಸ್‌ಐ ಎಂ.ಆರ್.ಜಗದೀಶ್ ತಿಳಿಸಿದರು.
ಬಳ್ಳಾರಿ ಕ್ಯಾಂಪ್‌ನಲ್ಲಿರುವ ಹುತಾತ್ಮ ಯೋಧ ಜಿ.ಶ್ರೀನಿವಾಸ್ ಕುಟುಂಬಸ್ಥರ ಮನೆಗೆ ಶನಿವಾರ ಭೇಟಿ ನೀಡಿ ಹುತಾತ್ಮರ ಸಾಹಸ ಸಾರುವ ಸ್ಮರಣಿಕೆ ನೀಡಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಹುತಾತ್ಮ ಎಂದರೆ ಕೇವಲ ಸಾವಲ್ಲ, ಅದು ನಂಬಿಕೆ. ಆಶಯ ಹಾಗೂ ದೇಶಸೇವೆಗಾಗಿ ಪ್ರಾಣಾರ್ಪಣೆ ಮಾಡಿದವರ ತ್ಯಾಗದ ಕಥೆಯಾಗಿದೆ. ಇಂದಿನ ಯುವ ಪೀಳಿಗೆ ಹುತಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಹುತಾತ್ಮರ ಮೂಲ ಸ್ಥಳಗಳಿಗೆ ತೆರಳಿ ಸೇವೆಯಲ್ಲಿರುವ ತುಕಡಿಗಳ ಯೋಧರ ಮೂಲಕ ಹುತಾತ್ಮರ ಶ್ರದ್ಧಾಂಜಲಿ ನಡೆಸಿ ಅವರ ಕುಟುಂಬಗಳಿಗೆ ಹುತಾತ್ಮರ ಸಾಹಸದ ನಾಮಲಕ ನೀಡಿ ಗೌರವಿಸಲಾಗುತ್ತಿದೆ ಎಂದರು.
ಹುತಾತ್ಮ ಯೋಧರ ನೆನಪು ನಿರಂತರವಾಗಿರಬೇಕು ಎಂದರೆ ಸ್ಥಳೀಯಾಡಳಿತ ಅವರ ಹೆಸರನ್ನು ಮುಖ್ಯ ರಸ್ತೆ, ಸರ್ಕಾರಿ ಸ್ಥಳ, ಉದ್ಯಾನಕ್ಕೆ ನಾಮಕರಣ ಮಾಡುವ ಮೂಲಕ ಚಿರಸ್ಮರಣೀಯವಾಗಿರಿಸಬೇಕು ಎಂದರು.
ನನ್ನ ತಮ್ಮ ಹುತಾತ್ಮರಾಗಿ 30 ವರ್ಷಗಳು ಕಳೆದಿವೆ. ಪುರಸಭೆ ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಅವರ ಹೆಸರು ಇರಿಸಿತ್ತು. ಬಸ್ ನಿಲ್ದಾಣದ ನವೀಕರಣದ ಸಂದರ್ಭದಲ್ಲಿ ಆ ನಾಮಲಕ ತೆರವುಗೊಳಿಸಿದ್ದಾರೆ. ಶೀಘ್ರದಲ್ಲಿ ಮತ್ತೆ ಶ್ರೀನಿವಾಸ್ ಹೆಸರನ್ನು ನಾಮಕರಣ ಮಾಡಬೇಕು ಎಂದು ಕುಟುಂಬಸ್ಥರಾದ ಕುಮಾರಸ್ವಾಮಿ, ಗೋವಿಂದಪ್ಪ ಒತ್ತಾಯಿಸಿದರು.
ವಿದ್ಯಾರ್ಥಿಗಳಲ್ಲಿ ದೇಶದ ಬಗ್ಗೆ ಪ್ರೀತಿ ಮೂಡಲಿ ಎನ್ನುವ ಉದ್ದೇಶದಿಂದ ನಾಮಲಕವನ್ನು ಜಿ.ಶ್ರೀನಿವಾಸ್ ವ್ಯಾಸಂಗ ಮಾಡಿದ ಕೆಎಲ್‌ಕೆ ಸರ್ಕಾರಿ ಶಾಲೆಯಲ್ಲಿ ಅಳವಡಿಸಲಾಯಿತು. ಪುರಸಭೆ ಸದಸ್ಯ ಲಕ್ಷ್ಮಣ್, ಹರಿಪ್ರಸಾದ್, ಸಣ್ಣಪ್ಪ, ಣಿ ಇದ್ದರು.