

ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 273 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ 55 ನಿರ್ಣಾಯಕ(ಕ್ರಿಟಿಕಲ್), ಮೂರು ದುರ್ಬಲ(ವಲ್ನರಬಲ್) ಮತಗಟ್ಟೆಗಳೆಂದು ಗುರುತಿಸಲಾಗಿರುವುದಾಗಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರುಚಿ ಬಿಂದಾಲ್ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣಾ ಮಾದರಿ ನೀತಿ ಸಂಹಿತೆ ಕುರಿತಂತೆ ಮಾಹಿತಿ ನೀಡಲು ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಬಿಳಿಗೆರೆ, ಶಬ್ಬೀರ್‌ನಗರ ಮತ್ತು ಹಳೇಬೀಡು ಗ್ರಾಮಗಳನ್ನು ದುರ್ಬಲ ಮತಗಟ್ಟೆಗಳೆಂದು ಗುರುತಿಸಲಾಗಿದೆ. 55 ನಿರ್ಣಾಯಕ ಮತ್ತು ಮೂರು ದುರ್ಬಲ ಮತಗಟ್ಟೆಗಳಿಗೆ ಈಗಾಗಲೇ ಅಧಿಕಾರಿಗಳ ತಂಡ ಭೇಟಿ ನೀಡಿ ಚುನಾವಣೆ ನಿರ್ಭೀತಿಯಿಂದ ನಡೆಯುವಂತೆ ಕ್ರಮವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕಿನ ಗಡಿಭಾಗಗಳ ವ್ಯಾಪ್ತಿಯನ್ನು ಒಳಗೊಂಡಂತೆ ಒಟ್ಟು 5 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಮನುಗನಹಳ್ಳಿ, ವೀರನಹೊಸಳ್ಳಿ, ಚಿಲ್ಕುಂದ, ಗಾವಡಗೆರೆ ಮತ್ತು ಮುತ್ತುರಾಯನಹೊಸಳ್ಳಿಯಲ್ಲಿ ತೆರೆಯಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ 5 ಫ್ಲೈಯಿಂಗ್ ಸ್ಕ್ವಾಡ್, 4 ಮಂದಿಯನ್ನೊಳಗೊಂಡ ಸ್ಟಾಟಿಕ್ ಸರ್ವೇಯಲೆನ್ಸ್ ಟೀಮ್ ಸ್ಥಳದಲ್ಲಿರಲಿದೆ. ಮೂರು ಪಾಳಿಯಲ್ಲಿ ತಂಡಗಳು ಕಾರ್ಯನಿರ್ವಹಿಸಲಿವೆ. ಅಲ್ಲದೆ, ವಿಡಿಯೋ ಸರ್ವೇಯಲೆನ್ಸ್ ಟೀಮ್ ಮತ್ತು ವಿಡಿಯೋ ವ್ಯೆಯಿಂಗ್ ಟೀಮ್ ಕೂಡ ಕಾರ್ಯನಿರ್ವಹಿಸಲಿದೆ. ಕಳೆದೊಂದು ವಾರದಲ್ಲಿ ತಾಲೂಕಿನಾದ್ಯಂತ 28 ಲೀಟರ್ ಅಕ್ರಮ ಮದ್ಯ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ನಗರದಾದ್ಯಂತ ಎಲ್ಲೆಡೆ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಯಾವುದೇ ರಾಜಕೀಯ ಪಕ್ಷಗಳು ಫ್ಲೆಕ್ಸ್‌ಗಳನ್ನು ಅಳವಡಿಸಲು ಅವಕಾಶವಿಲ್ಲ. ಅನುಮತಿಯಿಲ್ಲದೆ ಪಕ್ಷದ ಕಾರ್ಯಕ್ರಮಗಳು, ಜಾತ್ರೆ, ಸಮಾರಂಭಗಳನ್ನು ನಡೆಸುವಂತಿಲ್ಲ ಎಂದರು.
ಸಭೆ-ಸಮಾರಂಭಗಳು, ಜಾತ್ರೆ, ಹಬ್ಬಗಳು, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಪಕ್ಷಗಳ ರ‌್ಯಾಲಿಗಳನ್ನು ನಡೆಸಲು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಏಕಗವಾಕ್ಷಿ ಪದ್ಧತಿಯಡಿ ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಅನುಮತಿ ಪತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ. ಅನುಮತಿಯಿಲ್ಲದೆ ನಡೆಯುವ ಯಾವುದೇ ಕಾರ್ಯಕ್ರಮವನ್ನೂ ಮಾದರಿ ನೀತಿಸಂಹಿತೆ ಉಲ್ಲಂಘನೆ ಆಧಾರದಡಿ ಕ್ರಮವಹಿಸಲಾಗುವುದು. ರಾಜಕೀಯ ಪಕ್ಷಗಳ ಖರ್ಚುವೆಚ್ಚವನ್ನು ಗಮನಿಸಲು ಲೆಕ್ಕ ವಿಭಾಗ ತೆರೆಯಲಾಗಿದೆ. ಹೊಸದಾಗಿ ಯಾವುದೇ ಕಾಮಗಾರಿಗಳಿಗೆ ಚಾಲನೆ ನೀಡುವಂತಿಲ್ಲ. ಸರ್ಕಾರದ ಯೋಜನೆಯೊಂದರ ಕಾಮಗಾರಿ ಆರಂಭಗೊಂಡಿದ್ದರೆ ಅದನ್ನು ಮುಂದುವರಿಸಬಹುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಈ ಬಾರಿ 5,500 ಹೊಸ ಮತದಾರರು ಚುನಾವಣಾ ಆಯೋಗಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಯೋಗದ ನಿರ್ದೇಶನದಂತೆ ಏ.1ರವರೆಗೆ 18 ವರ್ಷ ಪೂರ್ಣಗೊಂಡ ಯುವಕರು ಮತಪಟ್ಟಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು ಹೊಸ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. 80 ವರ್ಷ ಮೇಲ್ಪಟ್ಟವರು ತಾಲೂಕಿನಲ್ಲಿ 402 ಜನರಿದ್ದಾರೆ. ಅವರ ಮನೆಬಾಗಿಲಿಗೆ ತೆರಳಿ ಮತದಾನ ನಡೆಸಲು ಕ್ರಮವಹಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಗಳಾದ ಡಾ.ಎಸ್.ಯು.ಅಶೋಕ್, ಬಿ.ಕೆ.ಮನು, ಶಿರಸ್ತೇದಾರ್ ಶಕೀಲಾ ಬಾನು, ಮುಖಂಡರಾದ ರವಿಶಂಕರ್, ದೇವರಾಜ್ ಒಡೆಯರ್, ರಮೇಶ್, ದೇವರಾಜ್ ಭಾಗವಹಿಸಿದ್ದರು.