

ಹುಣಸೂರು: ವಿಶ್ವ ಶ್ವಾನ ದಿನದ ಅಂಗವಾಗಿ ಹುಣಸೂರು ರೋಟರಿ ಸಂಸ್ಥೆ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ್ ಅವರ ಗ್ರೇಡ್‌ಡೆನ್ ತಳಿಯ ಲಿಯಾ ಪ್ರಥಮ ಸ್ಥಾನ ಗಳಿಸಿತು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಚಂದನ್‌ಗೌಡ ಅವರ ಜರ್ಮನ್ ಶೆಫರ್ಡ್ ತಳಿಯ ಕನ್ವರ್ ದ್ವಿತೀಯ ಸ್ಥಾನ ಹಾಗೂ ರಾಜಶೇಖರ್ ಅವರ ಗ್ರೇಡ್‌ಡೆನ್ ತಳಿಯ ಗ್ರೇ ಶ್ವಾನ ತೃತೀಯ ಸ್ಥಾನ ಗಳಿಸಿತು. ತೀರ್ಪುಗಾರರಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ಭಾಗವಹಿಸಿದ್ದರು.
ಹೊಸ ಅನುಭವ ನೀಡಿದ ಸ್ಪರ್ಧೆ: ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಆಯೋಜನೆ ಮಾಡಿದ್ದ ಶ್ವಾನ ಪ್ರದರ್ಶನ ಸ್ಪರ್ಧೆಗೆ ಶ್ವಾನಗಳ ಮಾಲೀಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಗ್ರೇಡ್‌ಡೆನ್, ರಾಟ್‌ವೀಲ್, ಲ್ಯಾಬರ್ಡೋಲ್, ಜರ್ಮನ್ ಶಫರ್ಡ್, ಪಿಟ್‌ಬುಲ್, ಗೋಲ್ಡನ್ ರೇಟ್ರಿವರ್, ಪಾಮೋರಿಯನ್, ಸಿಟ್ಜ್ ಹಾಗೂ ಪಗ್ ಸೇರಿದಂತೆ 14ಕ್ಕೂ ಹೆಚ್ಚು ವಿವಿಧ ತಳಿಯ 40ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿ ನೋಡುಗರನ್ನು ಬೆರಗುಗೊಳಿಸಿದವು. ಶ್ವಾನಗಳು ತಮ್ಮ ಮಾಲೀಕ ಹೇಳಿದ ಮಾತನ್ನು ತಪ್ಪದೇ ಕೇಳುವ ಪರಿಯನ್ನು ನೋಡಿ ಆಶ್ಚರ್ಯ ಚಕಿತರಾದರೆ, ಮತ್ತೆ ಕೆಲವು ತುಂಟ ಶ್ವಾನಗಳು ಮಾಲೀಕನ ಮಾತನ್ನು ಧಿಕ್ಕರಿಸಿ ಅಕ್ಕಪಕ್ಕದ ಶ್ವಾನಗಳ ಚುಂಬನಕ್ಕಾಗಿ ಹಾತೊರೆಯುತ್ತಿದ್ದ ದೃಶ್ಯ ನೋಡುಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಶ್ವಾನಗಳಿಗೂ ಸರ್ಟಿಫಿಕೇಟ್ ಹಾಗೂ ಪಾರಿತೋಷಕವನ್ನು ಪ್ರೀತಿ ವೆಟ್ ಮೆಡಿಕಲ್ ವತಿಯಿಂದ ವಿತರಿಸಲಾಯಿತು. ಶ್ವಾನ ಪ್ರೇಮಿ ಬೈಲಕುಪ್ಪೆಯ ಡೋಲ್ಮ ಡಾಗ್ ರೆಸ್ಕ್ಯೂ ಸೆಂಟರ್‌ನ ಕಾಲ್ಸಂಗ್ ದೋರ್ಜಿ ಹಾಗೂ ಹುಣಸೂರಿನ ಸರಸ್ವತಿಪುರಂನ ಬಸವರಾಜ್ ಅವರನ್ನು ಗೌರವಿಸಲಾಯಿತು. ರೋಟರಿ ಅಧ್ಯಕ್ಷ ರೊ. ಚನ್ನಕೇಶವ ಕಾರ್ಯದರ್ಶಿ ಕೆ.ಪಿ.ಪ್ರಸನ್ನ ಕುಮಾರ್, ಸದಸ್ಯರಾದ ಆನಂದ್, ರಾಜಶೇಖರ್, ಗಿರಿಯಣ್ಣ, ಶ್ಯಾಮ್, ಸತೀಶ್ ಇತರರು ಇದ್ದರು.