

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕರ್ಮಭೂಮಿಯಾಗಿದ್ದ ಹುಣಸೂರು ವಿಧಾನಸಭಾ ಕ್ಷೇತ್ರ ಈ ಸಲವೂ ಜಿದ್ದಾಜಿದ್ದಿನ ಸ್ಪರ್ಧೆಯಿಂದಲೇ ರಾಜ್ಯದ ಗಮನ ಸೆಳೆದಿದೆ.
ಎಚ್.ಪಿ.ಮಂಜುನಾಥ ಈ ಕ್ಷೇತ್ರದ ಹಾಲಿ ಶಾಸಕರು. ಕಾಂಗ್ರೆಸ್‌ನ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲೇ ಇವರಿಗೆ ಟಿಕೆಟ್ ಖಚಿತವಾಗಿದೆ. ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡರ ಪುತ್ರ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಅವರಿಗೆ ಇಲ್ಲಿ ಜೆಡಿಎಸ್ ಟಿಕೆಟ್ ಘೋಷಿಸಿದೆ. ಈ ಇಬ್ಬರು ಅಭ್ಯರ್ಥಿಗಳು ಮತಬೇಟೆ ಶುರು ಮಾಡಿದ್ದು, ಮತಪ್ರಚಾರ ನಡೆಸುವ ಮೂಲಕ ತಂತ್ರ-ಪ್ರತಿತಂತ್ರ ರೂಪಿಸುವುದರೊಂದಿಗೆ ಅಖಾಡವನ್ನು ರಂಗೇರಿಸಿದ್ದಾರೆ. ಆದರೆ ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.
ಹುಣಸೂರು ಕ್ಷೇತ್ರದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಹಾವು-ಏಣಿ ಆಟದ್ದೇ ಕಾರುಬಾರು. ಪಕ್ಷಕ್ಕಿಂತ ವ್ಯಕ್ತಿಗೆ ಇಲ್ಲಿ ಜನಮನ್ನಣೆ ಸಿಕ್ಕಿದೆ. ಡಿ.ದೇವರಾಜ ಅರಸು ರಾಜಕೀಯ ಪ್ರಭಾವಳಿ ದಶಕ ಕಾಲ ಎದ್ದು ಕಾಣುತ್ತದೆ.
ಅರಸು ಅವಿರೋಧ ಆಯ್ಕೆ:
1952, 1957ರ ಚುನಾವಣೆಗಳಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ಅರಸು ಮತ್ತು ಎನ್.ರಾಚಯ್ಯ ಗೆದ್ದಿದ್ದರು. 1962ರಲ್ಲಿ ಏಕಸದಸ್ಯ ಕ್ಷೇತವಾಗಿ ಬದಲಾವಣೆಯಾದ ನಂತರ ಅರಸು ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾದರು. ಇದು ಕ್ಷೇತ್ರ ಹಾಗೂ ಜಿಲ್ಲೆಯ ಚುನಾವಣಾ ಚರಿತ್ರೆಯಲ್ಲೇ ದಾಖಲೆ.
ಅರಸು ಪ್ರಭಾವಳಿ:
1967ರ ಚುನಾವಣೆಯಲ್ಲಿ ದೇವರಾಜ ಅರಸು ಮರು ಆಯ್ಕೆಯಾದರು. ಮುಖ್ಯಮಂತ್ರಿ ಎಸ್.ಆರ್.ಕಂಠಿ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವರಾದರು. ವಾರ್ತಾ, ಪಶುಸಂಗೋಪನೆ, ಸಾರಿಗೆ ಖಾತೆಯನ್ನು ನಿರ್ವಹಿಸಿದರು. ನಂತರ ಎಸ್.ನಿಜಲಿಂಗಪ್ಪ ಸರ್ಕಾರದಲ್ಲಿ ಅರಸು ಕಾರ್ಮಿಕ ಸಚಿವರಾದರು. ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾದರು. ‘ಕೆಪಿಸಿಸಿ ಅಧ್ಯಕ್ಷರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ’ ಎಂಬ ನಿಯಮವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಇಂದಿರಾ ಗಾಂಧಿ ಹೊರಡಿಸಿದ್ದರು. ಇದು ಅವರಿಗೆ ಹಿನ್ನಡೆಯಾಗುವ ಮೂಲಕ 1972ರ ಚುನಾವಣೆಗೆ ಸ್ಪರ್ಧಿಸಲಾಗಲಿಲ್ಲ. ಆಗ ಯು.ಕರಿಯಪ್ಪಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎಚ್.ಹೊಂಬೇಗೌಡ ವಿರುದ್ಧ ಜಯ ಗಳಿಸಿದರು.
ಅರಸು ನೇತೃತ್ವದ ಕಾಂಗ್ರೆಸ್ ಚುನಾವಣೆಯಲ್ಲಿ 165 ಸ್ಥಾನ ಗಳಿಸಿ ಅಧಿಕಾರಕ್ಕೇರಿತು. ಅವರು ನಿರೀಕ್ಷೆಯಂತೆ ಮುಖ್ಯಮಂತ್ರಿಯಾದರು. ಸಿಎಂ ಆದ 3 ತಿಂಗಳ ಬಳಿಕ ಕರಿಯಪ್ಪಗೌಡ ಅವರಿಂದ ರಾಜೀನಾಮೆ ಕೊಡಿಸಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಅರಸು ಮತ್ತೆ ಆಯ್ಕೆಯಾದರು. 1978ರ ಚುನಾವಣೆಯಲ್ಲಿ ಅರಸು ಅವರು ಎಚ್.ಎಲ್.ತಿಮ್ಮೇಗೌಡ ವಿರುದ್ಧ ಹೆಚ್ಚಿನ ಅಂತರದಿಂದ ಗೆಲುವು ಪಡೆದು ಮತ್ತೆ ಸಿಎಂ ಗಾದಿಗೆ ಏರಿದರು. ಆದರೆ, 1980ರಲ್ಲಿ ಇಂದಿರಾ ಗಾಂಧಿ ಅವರೊಂದಿಗೆ ಮನಸ್ತಾಪದಿಂದಾಗಿ ಸಿಎಂ ಸ್ಥಾನದಿಂದ ಕೆಳಗಿಳಿದರು. ಬಳಿಕ ಪ್ರತಿಪಕ್ಷದ ನಾಯಕರಾದರು. ಅರಸು ಅವರು 1952ರಿಂದ 1980ರ ವರೆಗೆ ಸತತವಾಗಿ 28 ವರ್ಷ (3 ತಿಂಗಳು ಬಿಟ್ಟು) ಶಾಸಕರಾಗಿ ದಾಖಲೆ ಬರೆದಿದ್ದಾರೆ.
ಚಂದ್ರಪ್ರಭಾ ರಂಗಪ್ರವೇಶ:
1982ರಲ್ಲಿ ಅರಸು ನಿಧನರಾದ ಬಳಿಕ 1983ರ ಚುನಾವಣೆಯಲ್ಲಿ ಅವರ ಪುತ್ರಿ ಚಂದ್ರಪ್ರಭಾ ಅರಸು ಜನತಾಪಕ್ಷದಿಂದ ಗೆದ್ದರು. ಚಂದಪ್ರಭಾ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾದರು. 1985ರ ಚುನಾವಣೆಯಲ್ಲಿ ಜನತಾಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಚಂದ್ರಪ್ರಭಾ ಅವರಿಗೆ ಸೋಲಾಯಿತು. ಆಗ 2,400 ಮತಗಳ ಅಂತರದಿಂದ ಜನತಾಪಕ್ಷದ ಅಭ್ಯರ್ಥಿ ಡಾ.ಎಚ್.ಎಲ್. ತಿಮ್ಮೇಗೌಡ ಜಯ ಸಾಧಿಸಿ ಶಾಸಕರಾದರು.
ತಂದೆಯ ಆಪ್ತನ ವಿರುದ್ಧ ಗೆದ್ದ ಮಗಳು:
1989ರಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದ್ರಪ್ರಭಾ ಅವರು ತಂದೆಯ ಆಪ್ತರಾದ ಡಿ.ಕರಿಯಪ್ಪಗೌಡ ಅವರನ್ನು 32,737 ಮತಗಳ ಅಂತರದಿಂದ ಸೋಲಿಸಿ, 2ನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಸಚಿವರಾದರು. ಬಳಿಕ ರಾಜ್ಯ ರಾಜಕಾರಣವನ್ನು ತೊರೆದ ಅವರು, 1991ರಲ್ಲಿ ಮೈಸೂರು ಲೋಕಸಭಾ ಕ್ಷೇತದಿಂದ ಗೆದ್ದು ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಇದರಿಂದಾಗಿ 1991ರಲ್ಲಿ ನಡೆದ ಹುಣಸೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್.ಚಿಕ್ಕಮಾದು ಬಿಜೆಪಿಯ ಸಿ.ಎಚ್.ವಿಜಯಶಂಕರ್ ಅವರನ್ನು 3,931 ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಶಾಸಕರಾದರು.
2 ಸಲ ಜಿಟಿಡಿಗೆ ಜಯ:
1994ರಲ್ಲಿ ಬಿಜೆಪಿಯ ವಿಜಯಶಂಕರ್ 2ನೇ ಪ್ರಯತ್ನದಲ್ಲಿ ಗೆದ್ದರು. ಇದರೊಂದಿಗೆ ಮೊದಲ ಬಾರಿಗೆ ಇಲ್ಲಿ ಕಮಲ ಚಿಗುರಿತು. 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಿ.ಎಚ್.ವಿಜಯಶಂಕರ್ ಜಯ ಕಂಡರು. ಇದರಿಂದಾಗಿ ನಡೆದ ಉಪಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ಜಿ.ಟಿ. ದೇವೇಗೌಡ ಆಯ್ಕೆಯಾದರು. ಕೇವಲ 13 ತಿಂಗಳ ಕಾಲ ಶಾಸಕರಾಗಿದ್ದರು.
1999ರಲ್ಲಿ ಬಿಜೆಪಿಯ ವಿ.ಪಾಪಣ್ಣ ಕಾಂಗ್ರೆಸ್‌ನ ಎಸ್.ಚಿಕ್ಕಮಾದು ಅವರನ್ನು 2,790 ಮತಗಳ ಅಂತರದಲ್ಲಿ ಪರಾಜಯಗೊಳಿಸಿದರು. 2004ರ ಚುನಾವಣೆಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ 2ನೇ ಬಾರಿಗೆ ಗೆದ್ದರು. ಆಗಲೂ ಚಿಕ್ಕಮಾದು 14,132 ಮತಗಳ ಅಂತರದಿಂದ ಮತ್ತೆ ಹಿನ್ನೆಡೆ ಅನುಭವಿಸಿದರು. ಜಿಟಿಡಿ ಅವರು ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿ ಸಹಕಾರ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದರು.
ಮಾಜಿಗಳ ಪಕ್ಷಾಂತರ:
2008ರ ಚುನಾವಣೆ ಹೊತ್ತಿಗೆ ಪ್ರಮುಖ ಅಭ್ಯರ್ಥಿಗಳು ಪಕ್ಷಾಂತರ ಮಾಡಿದರು. ಎಸ್.ಚಿಕ್ಕಮಾದು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ, ಜಿಟಿಡಿ ಜೆಡಿಎಸ್‌ನಿಂದ ಬಿಜೆಪಿಗೆ ಹಾರಿದರು. ಆ ಚುನಾವಣೆಯಲ್ಲಿ ಈ ವಲಸೆಗಾರರಿಗೆ ಮತದಾರರು ಮನ್ನಣೆ ನೀಡಲಿಲ್ಲ. ಮಾಜಿ ಶಾಸಕರನ್ನು ಮಣಿಸಿದ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ 15,041 ಮತಗಳ ಅಂತರದಿಂದ ಜಯ ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಮಾಜಿಗಳ ವಲಸೆ ಪರ್ವ:
2013ರ ಚುನಾವಣೆ ಹೊತ್ತಿಗೆ ಮಾಜಿ ಶಾಸಕರಾಗಿದ್ದ ಎಚ್.ಚಿಕ್ಕಮಾದು ಎಸ್‌ಟಿ ಮೀಸಲು ಕ್ಷೇತ್ರ ಎಚ್.ಡಿ.ಕೋಟೆಗೆ ಮತ್ತು ಜಿಟಿಡಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋಗಿ ಶಾಸಕರಾದರು. ಇಲ್ಲಿಂದ ಪಲಾಯನ ಮಾಡಿದ ಇಬ್ಬರು ಮಾಜಿಗಳಿಗೆ ಮತ್ತೆ ಶಾಸಕಗಿರಿ ಲಭಿಸಿತು ಎಂಬುದು ವಿಶೇಷ. ಆ ಚುನಾವಣೆಯಲ್ಲಿ ಎಚ್.ಪಿ.ಮಂಜುನಾಥ ಸುಲಭವಾಗಿ ಜಯ ಗಳಿಸಿ 2ನೇ ಬಾರಿಗೆ ಶಾಸಕರಾದರು.
ಹಳ್ಳಿಹಕ್ಕಿ ಗೆಲುವು-ಸೋಲು:
2018ರಲ್ಲಿ ಎಚ್.ಪಿ.ಮಂಜುನಾಥ್ ಅವರಿಗೆ ಸೋಲಾಯಿತು. ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದಿದ್ದ ಎಚ್.ವಿಶ್ವನಾಥ್ ಗೆದ್ದರು. ಕೆ.ಆರ್.ನಗರದಿಂದ ಪಕ್ಕದ ಹುಣಸೂರಿಗೆ ವಲಸೆ ಬಂದ ‘ಹಳ್ಳಿಹಕ್ಕಿ’, ಬಳಿಕ ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಯ ಗೂಡು ಸೇರಿಕೊಂಡಿತು. ಪರಿಣಾಮ, ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರಿಂದ 2019ರಲ್ಲಿ ಉಪಚುನಾವಣೆ ನಡೆಯಿತು. ಬಿಜೆಪಿ ಸರ್ಕಾರವಿದ್ದರೂ ವಿಶ್ವನಾಥ್ ಸೋತರು. ಒಂದೂವರೆ ವರ್ಷದಲ್ಲೇ ಮತ್ತೆ ಗೆದ್ದು ಎಚ್.ಪಿ. ಮಂಜುನಾಥ್ ಶಾಸಕರಾದರು. ಇದೀಗ ಅವರು 4ನೇ ಬಾರಿ ಶಾಸಕರಾಗಲು ಬೆವರು ಸುರಿಸುತ್ತಿದ್ದಾರೆ.
ಅರಸು ಅಧಿಪತ್ಯ:
ಹುಣಸೂರು ಕ್ಷೇತ್ರದ ಚುನಾವಣಾ ಇತಿಹಾಸ ಪ್ರಾರಂಭವಾಗುವುದೇ ದೇವರಾಜ ಅರಸು ಅವರಿಂದ. 26ನೇ ವಯಸ್ಸಿನಲ್ಲೇ ರಾಜಕೀಯ ಪ್ರವೇಶ ಮಾಡಿದ ಅವರು, ಇಲ್ಲಿಂದಲೇ ಮೇರು ನಾಯಕರಾಗಿ ಹೊರಹೊಮ್ಮಿದರು. ಮೊದಲ ಚುನಾವಣೆಯಿಂದ 1982ರವರೆಗೂ ಈ ಕ್ಷೇತದ ಮೇಲೆ ಅಧಿಪತ್ಯ ಸಾಧಿಸಿದ್ದರು. ನಡುವೆ 3 ತಿಂಗಳ ಅವಧಿ ಹೊರತುಪಡಿಸಿದರೆ ಅವರು ಸತತವಾಗಿ 6 ಬಾರಿ ಜಯ ಕಂಡು ಸಿಎಂ ಆಗಿ, ರಾಷ್ಟ್ರೀಯ ನಾಯಕರಾಗಿ ದೇಶದ ಗಮನ ಸೆಳೆದರು.