

ಯಲ್ಲಾಪುರ: ಮೂರು ವರ್ಷಗಳಿಗೊಮ್ಮೆ ನಡೆಯುವ ತಾಲೂಕಿನ ಹುಣಶೆಟ್ಟಿಕೊಪ್ಪದ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಬುಧವಾರ ಸಂಜೆ ದೇವಿಯ ಮೆರವಣಿಗೆಯೊಂದಿಗೆ ಆರಂಭಗೊಂಡಿತು.
ಫೆ. 4ರಿಂದ ಜಾತ್ರೆಯ ಕಾರ್ಯಗಳು ಆರಂಭವಾಗಿದ್ದು, ಐದು ಹೊರ ಮಂಗಳವಾರ, ಅಂಕೆ ಹಾಕುವುದು ಸೇರಿ ವಿವಿಧ ಧಾರ್ವಿುಕ ಕಾರ್ಯಗಳನ್ನು ಪೂರೈಸಲಾಗಿದೆ. ಬುಧವಾರ ಮಧ್ಯಾಹ್ನ ದೇವಸ್ಥಾನದಲ್ಲಿ ಜಾತ್ರೆಯ ಪೂರ್ವದ ಧಾರ್ವಿುಕ ಕಾರ್ಯಕ್ರಮಗಳು ಸಂಪನ್ನಗೊಂಡ ನಂತರ ದೇವಿಯ ಮೆರವಣಿಗೆ ಪ್ರಾರಂಭವಾಯಿತು.
ಮಂಗಳವಾದ್ಯ, ಡೊಳ್ಳು, ಜಾಗಟೆ, ಹಾಡು, ಭಜನೆ, ಜೋಗತಿಯರ ಕುಣಿತ, ಭಕ್ತರ ಜೈಕಾರಗಳು ಮೆರವಣಿಗೆಯ ಶೋಭೆ ಹೆಚ್ಚಿಸಿದವು. ಅಲಂಕೃತ ದೇವಿಯನ್ನು ಭಕ್ತರು ತಲೆಯ ಮೇಲೆ ಹೊತ್ತು ರಂಗೋಲಿ, ತಳಿರು-ತೋರಣಗಳಿಂದ ಶೃಂಗರಿಸಿದ ಬೀದಿಗಳಲ್ಲಿ ಸಂಚರಿಸಿದರು. ಮೆರವಣಿಗೆಯಲ್ಲಿ ಸಾಗುವ ದೇವಿಯರ ದರ್ಶನ ಪಡೆದ ಭಕ್ತರ ಹಷೋದ್ಗಾರ ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿ ಅಲಂಕೃತ ಜಾತ್ರಾ ಮಂಟಪದವರೆಗೆ ತೆರಳಿದ ದೇವಿ ಮಂಟಪದಲ್ಲಿ ವಿರಾಜಮಾನಳಾಗುವ ಮೂಲಕ ಜಾತ್ರೆ ರಂಗೇರಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಾ. 5ರವರೆಗೆ ಜಾತ್ರಾ ಮಂಟಪದಲ್ಲಿ ದೇವಿಗೆ ವಿವಿಧ ಪೂಜೆ, ಸೇವೆಗಳು ನಡೆಯಲಿದೆ. 5ರಂದು ಮಧ್ಯಾಹ್ನ ದೇವಿಯ ಮೆರವಣಿಗೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.