ಹುಡ್ಕೋ ಕಾಲನಿ ಪುರುಷ ಆಸ್ಪತ್ರೆಯಿಂದ ಬಿಡುಗಡೆ

carona logo
Published on

ಗದಗ: ನಗರದ ಹುಡ್ಕೋ ಕಾಲನಿ ನಿವಾಸಿ 54 ವರ್ಷದ ಪುರುಷ ಗುಣವಾಗಿ ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅವರು, ಹೆಚ್ಚಿನ ಚಿಕಿತ್ಸೆಗಾಗಿ ಮೇ 27ರಂದು ಗದಗನಿಂದ ಖಾಸಗಿ ವಾಹನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿ, ಎಚ್​ಸಿಎಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರ ಗಂಟಲ ದ್ರವ ಪರೀಕ್ಷಿಸಿದಾಗ ಕೋವಿಡ್-19 ಸೋಂಕು ದೃಢಪಟ್ಟಿತು. ಚಿಕಿತ್ಸೆ ನಂತರ ಅವರು ಸಂಪೂರ್ಣ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

35 ಜನರು ಆಗಮನ: ಮುಂಬೈ-ಗದಗ ಎಕ್ಸ್​ಪ್ರೆಸ್ ರೈಲಿನ ಮೂಲಕ ಮಹಾರಾಷ್ಟ್ರದಿಂದ ನಗರದ ರೈಲು ನಿಲ್ದಾಣಕ್ಕೆ ಬುಧವಾರ 35 ಪ್ರಯಾಣಿಕರು ಬಂದಿಳಿದಿದ್ದಾರೆ. ಈ ಪೈಕಿ 14 ಜನ ಗದಗ ಜಿಲ್ಲೆಯವರಾಗಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಉಳಿದ 21 ಜನರು ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯವರಾಗಿದ್ದು, ಅವರನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಯಿತು.

ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 6929 ಜನರು ನಿಗಾದಲ್ಲಿದ್ದು, 40 ಜನರು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿದ್ದಾರೆ. ಒಟ್ಟು 7447 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಿದ್ದು, 7376 ವರದಿಗಳು ನೆಗೆಟಿವ್ ಬಂದಿದ್ದು, ಇನ್ನೂ 22 ವರದಿಗಳು ಬರುವುದು ಬಾಕಿ ಇದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 49 ಕರೊನಾ ಪ್ರಕರಣಗಳು ದೃಢಪಟ್ಟಿವೆ. ಇಬ್ಬರು ಮೃತಪಟ್ಟಿದ್ದಾರೆ. 34 ಜನರು ಗುಣವಾಗಿದ್ದಾರೆ. 13 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net