ಹುಡಾ ಅಧ್ಯಕ್ಷರದು ಆರಂಭಶೂರತ್ವವೇ?

h9- Huda 1
Published on

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರೇ, ಅಕ್ರಮ, ಅನಧಿಕೃತ ಲೇಔಟ್ ವಿರುದ್ಧ ನಿಮ್ಮ ಕಾರ್ಯಾಚರಣೆ ಬರೀ ಆರಂಭ ಶೂರತ್ವವೇ? ಅಥವಾ ಲ್ಯಾಂಡ್ ಮಾಫಿಯಾ, ಇನ್ಯಾವುದೋ ಅದೃಶ್ಯ ಶಕ್ತಿಯ ಒತ್ತಡದಿಂದ ಹಿಂದೆ ಸರಿದಿರೋ...? ಹೀಗೆಂದು ಅವಳಿನಗರದ ಸಾರ್ವಜನಿಕರು ಹುಡಾ ಅಧ್ಯಕ್ಷರ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ.

ಅವಳಿನಗರದಲ್ಲಿ ತಲೆ ಎತ್ತಿರುವ ಅಕ್ರಮ ಲೇಔಟ್​ಗಳ ವಿರುದ್ಧ ನಾಗೇಶ ಕಲಬುರ್ಗಿ ಅವರು ಹುಡಾ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು. 57ರಷ್ಟು ಅಕ್ರಮ ಲೇಔಟ್ ಗುರುತಿಸಿ ಅದರಲ್ಲಿ ಅರ್ಧಕ್ಕೂ ಹೆಚ್ಚು ಲೇಔಟ್​ಗಳಲ್ಲಿನ ಗುರುತು ಕಲ್ಲು, ಚರಂಡಿ, ನೀರಿನ ಕೊಳವೆ ಮಾರ್ಗ ಇತ್ಯಾದಿಗಳನ್ನು ತೆರವು ಮಾಡಿದ್ದರು.

ಅಧ್ಯಕ್ಷರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಕ್ರಮ ಲೇಔಟ್ ನಿರ್ವಪಕರಿಗೆ ಎಚ್ಚರಿಕೆ ನೀಡಿದ್ದ ನಾಗೇಶ ಅವರ ಕ್ರಮಕ್ಕೆ ಶಹಬ್ಬಾಶ್ ಎಂದು ಬೆನ್ನು ತಟ್ಟಿದ್ದರು. ಅನೇಕ ನಾಗರಿಕರು ಅಕ್ರಮದ ಬಗ್ಗೆ ಮಾಹಿತಿ ಕೂಡ ನೀಡಿದ್ದರು.

ಹುಬ್ಬಳ್ಳಿಯ ಮಂಟೂರ ರಸ್ತೆ, ಹಳೇಹುಬ್ಬಳ್ಳಿ ನೇಕಾರ ನಗರ ಮುಂತಾದ ಕಡೆಗಳಲ್ಲಿ ಅಕ್ರಮ ಲೇಔಟ್​ಗಳ ಬಗ್ಗೆ ಸ್ಥಳೀಯರೇ ದೂರು ಕೊಟ್ಟಿದ್ದಾರೆ. ಅಂತಹ ಸ್ಥಳಗಳನ್ನು ಹೋಗಿ ನೋಡಲೂ ಇಲ್ಲ. ಇಂತಹ ಸಂದರ್ಭದಲ್ಲಿ ಆರಂಭ ಮಾಡಿದ ತಿಂಗಳಲ್ಲೇ ಕಾರ್ಯಾಚರಣೆ ನಿಲ್ಲಿಸಿರುವುದು ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ.

ನೋಟಿಸ್ ನೀಡಿದ್ದರು:

ಕಳೆದ ಜೂನ್- ಜುಲೈನಲ್ಲಿ ಅವಳಿನಗರ ವ್ಯಾಪ್ತಿಯಲ್ಲಿ ಅಂದಾಜು 57 ಅಕ್ರಮ ಲೇಔಟ್ ಗುರುತಿಸಿದ್ದ ಹುಡಾ ಅಧಿಕಾರಿಗಳು ಅವುಗಳ ನಿರ್ವಪಕರಿಗೆ ನೋಟಿಸ್ ನೀಡಿದ್ದರು. ಎರಡು ನೋಟಿಸ್ ನಂತರ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಲೇಔಟ್ ತೆರವಿಗೆ ಅಧ್ಯಕ್ಷರ ತಂಡ ಜೆಸಿಬಿ ಸಮೇತ ಫೀಲ್ಡಿಗೆ ಇಳಿದಿತ್ತು.

ತೆರವು ಆರಂಭವಾಗುತ್ತಿದ್ದಂತೆ ಅಕ್ರಮ ಕುಳಗಳಿಗೆ ಭಯ ಹುಟ್ಟಿತ್ತು. ಅಂದಾಜು 25 ಅಕ್ರಮ ಲೇಔಟ್​ದಾರರು ಹುಡಾ ಸಂರ್ಪಸಿ ಕಾನೂನುಬದ್ಧ ಮಾಡಿಕೊಳ್ಳುವುದಾಗಿ ಮನವಿ ಮಾಡಿದ್ದರು. ಅದೇ ರೀತಿ ಕಾಲಾವಕಾಶವನ್ನೂ ಕೇಳಿದ್ದರು.

ಕಾನೂನು ಬದ್ಧ ಹೇಗೆ?:

ಶೇತ್ಕಿ (ಕೃಷಿ) ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ವಿುಸಿ ಕೇವಲ ಬಾಂಡ್ ಮೇಲೆ ನಿವೇಶನ ಮಾರಾಟ ಮಾಡಲಾಗುತ್ತಿದೆ. ಅಲ್ಲಿ ಸರಿಯಾದ ರಸ್ತೆ, ಚರಂಡಿ, ಸಿಎ ನಿವೇಶನ, ಉದ್ಯಾನಕ್ಕೆ ಜಾಗ... ಯಾವುದನ್ನೂ ಬಿಟ್ಟಿರುವುದಿಲ್ಲ. ಹೀಗೆ ಮಾಡಿದ ಲೇಔಟ್​ಗಳಲ್ಲಿ ಈ ಎಲ್ಲ ಸೌಲಭ್ಯ ಕಲ್ಪಿಸಲು ನಿರ್ವಪಕರು ಮುಂದೆ ಬಂದರೆ ಅದನ್ನು ಕಾನೂನು ಬದ್ಧ ಮಾಡಬಹುದಾಗಿದೆ.

ನಿಯಮಾವಳಿ ಪ್ರಕಾರ ಬಡಾವಣೆ ಪ್ರದೇಶದ ಶೇ. 55ರಲ್ಲಿ ನಿವೇಶನ, ಶೇ. 45ರಲ್ಲಿ ರಸ್ತೆ, ನಾಗರಿಕ ಸೌಲಭ್ಯ(ಸಿಎ), ಗಾರ್ಡನ್ ಇತ್ಯಾದಿಗಾಗಿ ಜಾಗ ಬಿಡಬೇಕು. ಒಂದು ವೇಳೆ ಲೇಔಟ್​ನಲ್ಲಿ ಜಾಗ ಬಿಟ್ಟಿಲ್ಲದಿದ್ದರೆ ಪಕ್ಕದ ಜಮೀನು ಖರೀದಿ ಮಾಡಿ ಅಗತ್ಯ ಸೌಲಭ್ಯ ಕಲ್ಪಿಸಬಹುದಾಗಿದೆ. ಈ ಎಲ್ಲ ಅವಕಾಶಗಳನ್ನು ಅವರಿಗೆ ನೀಡಲಾಗಿತ್ತು.

ಹೀಗೆಲ್ಲ ನಡೆಯುತ್ತಿರುವ ಸಂದರ್ಭದಲ್ಲಿ ಕಳೆದ ಎರಡು ತಿಂಗಳಿಂದ ಅಕ್ರಮ ವಸತಿ ವಿನ್ಯಾಸದ ವಿರುದ್ಧದ ಕಾರ್ಯಾಚರಣೆ ಸ್ಥಗಿತವಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ತೆರವು ಮಾಡದೇ ಬಿಡುವುದಿಲ್ಲ:

ಹುಬ್ಬಳ್ಳಿ- ಧಾರವಾಡದಲ್ಲಿ ಅಕ್ರಮ ಲೇಔಟ್ ವಿರುದ್ಧದ ಕಾರ್ಯಾಚರಣೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕಾನೂನು ಬದ್ಧ ಮಾಡಿಕೊಳ್ಳಲು ಕೆಲವರು ಕಾಲಾವಕಾಶ ಕೇಳಿದ್ದರಿಂದ ಕೆಲ ದಿನ ಸುಮ್ಮನಿದ್ದೆವು. ಸಂಪೂರ್ಣ ಅಕ್ರಮ ತೆರವು ಮಾಡದೇ ಬಿಡುವುದಿಲ್ಲ. ಯಾವುದೇ ಒತ್ತಡಕ್ಕೂ ಮಣಿದಿಲ್ಲ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಜಿಲ್ಲೆಯ ಎಲ್ಲ ಶಾಸಕರು ಅಕ್ರಮದ ವಿರುದ್ಧ ಇದ್ದಾರೆ. ಹಿಂದಿನ ಹುಡಾ ಸಭೆಗಳಲ್ಲಿ ಅಕ್ರಮ ಲೇಔಟ್ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಅಕ್ರಮದಿಂದ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟವಿದೆ. ಹಾಗಾಗಿ ಎಲ್ಲ ಜನಪ್ರತಿನಿಧಿಗಳು ಕಾರ್ಯಾಚರಣೆಗೆ ಬೆಂಬಲ ನೀಡಿದ್ದಾರೆ ಎಂದರು.

ಕ್ರಿಮಿನಲ್ ಕೇಸ್: ಯಾರು ಅಕ್ರಮ ಲೇಔಟ್ ತೆರವಿಗೆ ಸಹಕಾರ ನೀಡುವುದಿಲ್ಲವೋ ಮತ್ತು ತೆರವಿನ ನಂತರ ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸುವರೋ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಪೊಲೀಸ್ ಆಯುಕ್ತರೊಂದಿಗೆ ರ್ಚಚಿಸಲಾಗಿದೆ ಎಂದೂ ನಾಗೇಶ ತಿಳಿಸಿದ್ದಾರೆ.

ಅಕ್ರಮ ವಿರುದ್ಧದ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ಬಹಳಷ್ಟು ಸಹಕಾರ ನೀಡಿದ್ದಾರೆ. ತಮಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆಗೆ ಒಬ್ಬ ಗನ್ ಮ್ಯಾನ್ ನೀಡಲೂ ಒಪ್ಪಿದ್ದಾರೆ ಎಂದರು.

ಮತ್ತೆ 150 ಅಕ್ರಮ ಲೇಔಟ್ ಪತ್ತೆ ಹಚ್ಚಲಾಗಿದ್ದು ಶೀಘ್ರ ಅವುಗಳ ವಿರುದ್ಧ ಕಾರ್ಯಾಚರಣೆ ಪುನರಾರಂಭವಾಗಲಿದೆ. ಕಾನೂನುಬದ್ಧ ಮಾಡಿಕೊಳ್ಳಲೂ ಕಾಲಾವಕಾಶ ನೀಡುತ್ತೇವೆ. ಅಕ್ರಮ ಲೇಔಟ್ ವಿರುದ್ಧದ ತಮ್ಮ ಹೋರಾಟ ಒಂದು ದಡಕ್ಕೆ ಹಚ್ಚದೇ ಬಿಡುವುದಿಲ್ಲ. ಇದಕ್ಕೆ ಪೊಲೀಸ್ ಇಲಾಖೆ ಸಹಕಾರವೂ ಇದೆ.- ನಾಗೇಶ ಕಲಬುರ್ಗಿ, ಹುಡಾ ಅಧ್ಯಕ್ಷ

ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಕ್ರಮ ಲೇಔಟ್ ವಿರುದ್ಧ ಕಾರ್ಯಾಚರಣೆ ಸ್ಥಗಿತವಾಗಿದೆ. ನವೆಂಬರ್ 3ರ ನಂತರ ಮತ್ತೆ ಆರಂಭವಾಗಲಿದೆ. ಈಗಾಗಲೇ ಲೇಔಟ್ ನಿರ್ವಪಕರಿಗೆ ನೋಟಿಸ್ ನೀಡಲಾಗಿದೆ.- ವಿನಾಯಕ ಪಾಲನಕರ, ಹುಡಾ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net