

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಾವಿದರು ಭೂಮಿ ಮೇಲಿನ ಗಂಧರ್ವರು. ಅವರಲ್ಲಿ ಸಾವಿರ ಹಾಡಿನ ಸರದಾರ ಹುಕ್ಕೇರಿ ಬಾಳಪ್ಪನವರು ಒಬ್ಬರು. ಸರ್ಕಾರ ಹುಕ್ಕೇರಿ ಬಾಳಪ್ಪನವರ ಸ್ಮಾರಕ ನಿರ್ಮಿಸಬೇಕು ಎಂದು ಬೈಲಹೊಂಗಲ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಕುಪ್ಪಸಗೌಡರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಮವಾರ ಆಯೋಜಿಸಿದ್ದ ಸಾವಿರ ಹಾಡಿನ ಸರದಾರ ಹುಕ್ಕೇರಿ ಬಾಳಪ್ಪ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹುಕ್ಕೇರಿ ಬಾಳಪ್ಪನವರು ಎಲ್ಲ ಪ್ರಕಾರದ ಗೀತೆಗಳನ್ನು ಹಾಡುತ್ತಿದ್ದರು. ಕರ್ನಾಟಕದ ಕವಿಗಳ ಹಾಡುಗಳಿಗೆ ಜೀವ ತುಂಬಿದವರು ಬಾಳಪ್ಪನವರು. ಹಾಡಿನ ಮೂಲಕ ಸಮಾಜ, ರೈತರು, ಮಕ್ಕಳನ್ನು, ತಪ್ಪು ದಾರಿ ಹಿಡಿದವರನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ತತ್ವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸುವ ಹಾಡುಗಳನ್ನು ಹಾಡುತ್ತಿದ್ದರು. ಅವರು ಐದು ದಶಕಗಳವರೆಗೆ ಜಾನಪದ, ಸುಗಮ ಸಂಗೀತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಉಪ ಆರಕ್ಷಕ ಅಧೀಕ್ಷಕ ಬಿ.ಡಿ ಪಾಟೀಲ ಮಾತನಾಡಿ, ಸಂಗೀತ, ನಾಟಕ, ಜನಪದ ಕಲೆಗಳು ಹುಟ್ಟಿರುವುದೇ ಉತ್ತರ ಕರ್ನಾಟಕದಲ್ಲಿ. ಆದಾಗ್ಯೂ ಈ ಭಾಗದ ಕಲಾವಿದರಿಗೆ ಸಿಗಬೇಕಾದ ಗೌರವ ಕಡಿಮೆಯಾಗಿದೆ. ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಕಲಾವಿದರು ಹಾಗೂ ಕಲೆ ಬೆಳೆಸಬೇಕು ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಅಂದಾನೆಪ್ಪ ಬಾಳಪ್ಪ ಹುಕ್ಕೇರಿ, ಪ್ರಮೀಳಾ ಜಕ್ಕಣ್ಣವರ, ಗುರು ಹಿರೇಮಠ, ನಿಂಗಣ್ಣ ಕುಂಟಿ, ಚಂದ್ರಶೇಖರ ಅಮೀನಗಡ, ಮೇಘಾ ಹುಕ್ಕೇರಿ, ಹರ್ಷವರ್ಧನ ಶೀಲವಂತ, ಮಹಾಂತೇಶ ನರೇಗಲ್, ಇತರರು ಇದ್ದರು.
ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.