ಹುಕ್ಕೇರಿ ಪೈಲಟ್ ತಾಲೂಕನ್ನಾಗಿ ಘೋಷಿಸಿ

15Huk1
Published on

ಹುಕ್ಕೇರಿ: ಕೇಂದ್ರ ಸರ್ಕಾರ ಸೋಲಾರ್ ಮತ್ತು ವಿಂಡ್ ಪವರ್ ಯೋಜನೆಯಡಿ ಹುಕ್ಕೇರಿ ತಾಲೂಕನ್ನು ಪೈಲಟ್ ತಾಲೂಕು ಎಂದು ಘೋಷಿಸಿ ಸಂಘಕ್ಕೆ ಅವಶ್ಯವಿರುವ ಮೂಲಸೌಲಭ್ಯ ಕಲ್ಪಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶಾಸಕ ನಿಖಿಲ ಕತ್ತಿ ಮನವಿ ಮಾಡಿದರು.

ನವದೆಹಲಿಯಲ್ಲಿ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಈಚೆಗೆ ಭೇಟಿ ಮಾಡಿ ಮಾತನಾಡಿದ ಅವರು, ಸಹಕಾರಿ ತತ್ತ್ವದಡಿ ಗ್ರಾಹಕರಿಗೆ ಮತ್ತು ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ದೇಶದ ಏಕೈಕ ಸಂಸ್ಥೆಯಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ತಾಲೂಕಿನ ೧೨೩ ಗ್ರಾಮಗಳಿಗೆ ಹಾಗೂ ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣ, ಕಣಗಲಾ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿಂದ ನಿರಂತರ ಜ್ಯೋತಿ ಯೋಜನೆಯಡಿ ದಿನದ ೨೪ ಗಂಟೆ ಮತ್ತು ರೈತರ ೩೫ ಸಾವಿರ ಪಂಪ್‌ಸೆಟ್‌ಗಳಿಗೆ ೭ ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಪಂಪ್‌ಸೆಟ್‌ಗಳಿಗೆ ೫೧ ಮೆಗಾವಾಟ್ ವಿದ್ಯುತ್ ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ, ಇದಕ್ಕೆ ದಿನದ ೨೪ ತಾಸು ವಿದ್ಯುತ್ ಸರಬರಾಜು ಮಾಡಲು ಹೆಚ್ಚುವರಿಯಾಗಿ ೧೦೦ ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ತಾಲೂಕಿನ ೮೭ ಸಾವಿರ ಮನೆಗಳಿಗೆ ೧೧ ಮೆಗಾವಾಟ್ ವಿದ್ಯುತ್, ತೋಟಪಟ್ಟಿಯ ೧೪ ಸಾವಿರ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಸಲು ಅಂದಾಜು ೫ ಮೆಗಾವಾಟ್ ವಿದ್ಯುತ್ ಬೇಕಾಗುತ್ತದೆ. ತೋಟಪಟ್ಟಿ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ೪೫ ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಅನುಮತಿಸಿಲ್ಲ ಎಂದು ತಿಳಿಸಿದರು.

ಮನವಿಗೆ ಸಚಿವ ಪ್ರಲ್ಹಾದ್ ಜೋಶಿ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕಾರಿ ತತ್ತ್ವದಡಿ ವಿದ್ಯುತ್ ಸರಬರಾಜು ಮಾಡುವ ಸಂಘದ ಕಾರ್ಯ ವಿಶಿಷ್ಟ ಮತ್ತು ಮಾದರಿಯಾಗಿದೆ. ತಮ್ಮ ಬೇಡಿಕೆಗೆ ವಿಶೇಷ ಆದ್ಯತೆ ನೀಡಿ ಪೈಲಟ್ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net