

ಗುಂಡ್ಲುಪೇಟೆ: ತಾಲೂಕಿನ ಹುಂಡೀಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪ್ರಶಸ್ತಿ ದೊರಕಿದೆ.
ಈ ಎರಡೂವರೆ ವರ್ಷದಲ್ಲಿ ಶಾಲಾ ಕಟ್ಟಡಗಳ ದುರಸ್ತಿ, ಬಣ್ಣ ಬಳಿಯುವುದು, ಬಸ್ ನಿಲ್ದಾಣಗಳ ದುರಸ್ತಿ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ, ಸ್ಮಶಾನ ಭೂಮಿ ಅಭಿವೃದ್ಧಿ, ರೈತರ ಜಮೀನಿಗೆ ರಸ್ತೆ ನಿರ್ಮಾಣ, ಗ್ರಾಮಗಳಿಗೆ ಸೋಲಾರ್ ಲೈಟ್ ಅಳವಡಿಕೆ, ಕಸ ವಿಲೇವಾರಿಗೆ ಆದ್ಯತೆ ನೀಡಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ.
ಕಸ ವಿಂಗಡಣೆಗೆ ಪ್ರತಿ ಮನೆ ಬಕೆಟ್‌ಗಳ ವಿತರಣೆ, ಕಸ ವಿಲೇವಾರಿ ವಾಹನವನ್ನು ಖರೀದಿಸಿ ಹಸಿ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ತಾಲೂಕಿಗೆ ಮೊದಲ ಡಿಜಿಟಲ್ ಲೈಬ್ರರಿ ನಿರ್ಮಿಸುವ ಜತೆಗೆ ಇನ್ನೂ ಹತ್ತು ಹಲವು ರೈತ ಉಪಯೋಗಿ ಕಾರ್ಯಗಳ ಅನುಷ್ಠಾನ ಮಾಡಲಾಗಿದ್ದರಿಂದ ಈ ಪ್ರಶಸ್ತಿಗೆ ಭಾಜನವಾಗಿದೆ.
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಬೆಂಗಳೂರಲ್ಲಿ ಗೃಹಣಿಯಾಗಿದ್ದ ಅಧ್ಯಕ್ಷೆಯಾಗಿರುವ ಲಕ್ಷ್ಮೀ ಕರೊನಾ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಂ ಕಾರಣದಿಂದ ತಮ್ಮ ಪತಿ ಮಂಜುನಾಥ್ ಜತೆ ಸ್ವಗ್ರಾಮಕ್ಕೆ ಬಂದರು. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುವ ಜತೆಗೆ ಅವರಿಗೆ ಅಧ್ಯಕ್ಷ ಗಾದಿಯೂ ಒಲಿದು ಬಂತು. ಈಗ ಲಕ್ಷ್ಮೀ ತಮ್ಮ ಸಂಪೂರ್ಣ ಸಮಯವನ್ನು ಪಂಚಾಯಿತಿ ಪ್ರಗತಿಗೆ ಮೀಸಲಿಟ್ಟಿದ್ದಾರೆ.
ಕಳೆದ ಐದು ವರ್ಷಗಳಿಂದ ಹಂಗಳ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕೆಲಸ ಮಾಡುತ್ತಿದ್ದ ಕುಮಾರಸ್ವಾಮಿ ಅವರು ಆ ಪಂಚಾಯಿತಿಗೆ ಪ್ರತಿವರ್ಷವೂ ಗಾಂಧಿ ಗ್ರಾಮ ಪ್ರಶಸ್ತಿ ಬರುವಂತೆ ಶ್ರಮಿಸಿದ್ದರು. ಕಳೆದ ವರ್ಷ ಹುಂಡೀಪುರಕ್ಕೆ ವರ್ಗಾವಣೆಯಾಗಿ ಬಂದ ನಂತರ ತಮ್ಮ ಹಿಂದಿನ ಅನುಭವ ಹಾಗೂ ಆಡಳಿತ ಮಂಡಳಿ ಸಹಕಾರದಿಂದ ಉತ್ತಮ ಕಾರ್ಯ ಕೈಗೊಂಡರು. ಪರಿಣಾಮ ಹುಂಡೀಪುರ ಗ್ರಾಮ ಪಂಚಾಯಿತಿ ಮೊದಲ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿಗೆ ಭಾಜನವಾಗಿದೆ.