

ಹಾಸನ: ಹಾಸನಾಂಬ-ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಈ ಬಾರಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಬಾರಿ ಸುಮಾರು 14.20 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಹಾಸನಾಂಬೆ ದೇವಿ ದರ್ಶನ ಪಡೆದರೆ, 14 ದಿನದಲ್ಲಿ 8.72 ಕೋಟಿ ರೂ. ಸಂಗ್ರಹವಾಗಿದೆ.
ಗುರುವಾರ ಬೆಳಗ್ಗೆಯಿಂದಲೇ ಸೂಕ್ತ ಭದ್ರತೆಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಇದರಲ್ಲಿ ದಾಖಲೆಯ ಹಣ ಸಂಗ್ರಹವಾಗಿದೆ. ಸಿದ್ದೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೂ ಹಣ ಎಣಿಕೆ ಕಾರ್ಯವನ್ನು ನಡೆಸಲಾಯಿತು. ಹಾಸನಾಂಬೆ ಹುಂಡಿಯಲ್ಲಿ 2,50,77,497 ರೂ. ಸಂಗ್ರಹವಾಗಿತ್ತು. ಅದೇ ರೀತಿ ಸಿದ್ದೇಶ್ವರ ಸ್ವಾಮಿ ಹುಂಡಿಯಲ್ಲಿ 11.35 ಲಕ್ಷ ರೂ. ಹಣ ಸಂಗ್ರಹವಾಗಿತ್ತು.
ಈಗಾಗಲೇ ಲಾಡು ಹಾಗೂ 300 ರೂ. ಮತ್ತು 1000 ರೂ. ಟಿಕೆಟ್ ಮಾರಾಟದಿಂದ 6,17,00,034 ರೂ. ಸಂಗ್ರಹವಾಗಿದ್ದು, ಹುಂಡಿ ಹಣವೂ ಸೇರಿ ಒಟ್ಟು 8,72,12,531 ರೂ. ಸಂಗ್ರಹವಾಗುವ ಮೂಲಕ ದಾಖಲೆ ಬರೆಯಲಾದಿದೆ. ಮೂಲಗಳ ಪ್ರಕಾರ 2017 ರಲ್ಲಿ 5.20 ಕೋಟಿ ರೂ. ಸಂಗ್ರಹವಾಗಿ ದಾಖಲೆ ನಿರ್ಮಿಸಿತ್ತು. ಈ ಬಾರಿ ಅದನ್ನು ಮೀರಿಸಿ ಇತಿಹಾಸ ಸೃಷ್ಟಿಸಿದೆ.
ನ.2ರಿಂದ 15ರವರೆಗೆ ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆದಿತ್ತು. ಈ ಅವಧಿಯಲ್ಲಿ ಮೊದಲ ಹಾಗೂ ಕಡೆಯ ದಿನ ಸಾರ್ವಜನಿಕ ದರ್ಶನ ಇಲ್ಲದೇ ಇದ್ದರೂ, ಗಣ್ಯರು, ಜನಪ್ರತಿನಿಧಿಗಳು ಸೇರಿ ಸುಮಾರು 14.20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಹೀಗಾಗಿ ಈ ಸಲ ಆದಾಯ ಹೆಚ್ಚಾಗಿದೆ.
ಕೋರಿಕೆ ಪತ್ರ ಬಹಿರಂಗ ಇಲ್ಲ:
ಹಿಂದಿನ ವರ್ಷಗಳಂತೆ ಈ ಬಾರಿಯೂ ವಿವಿಧ ಬೇಡಿಕೆ, ಇಷ್ಟಾರ್ಥ, ಆಸೆ-ಕನಸುಗಳನ್ನು ಈಡೇರಿಸು ತಾಯಿ ಎಂದು ಹಲವು ಕೋರಿಕೆ ಪತ್ರಗಳು ಹುಂಡಿ ಸೇರಿದ್ದವು. ಆದರೆ ಕಳೆದ ಎರಡು ವರ್ಷದ ಹಿಂದೆ ಅವಾಂತರ ಸೃಷ್ಟಿಯಾಗಿದ್ದ ಕಾರಣದಿಂದ ಈ ಬಾರಿ ಯಾವುದೇ ಕೋರಿಕೆ ಪತ್ರಗಳನ್ನು ಬಹಿರಂಗಪಡಿಸದಂತೆ ಉಪ ವಿಭಾಗಾಧಿಕಾರಿ ಮಾರುತಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಹಿನ್ನೆಲೆ, ಯಾವುದನ್ನೂ ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ಭಕ್ತರ ಕೋರಿಕೆ ಗುಪ್ತವಾಗಿಯೇ ಉಳಿದಿವೆ.
ವಿದೇಶಿ ಕರೆನ್ಸಿ-ಆಭರಣ:
ಈ ಬಾರಿಯೂ ಸಹ ಕಾಣಿಕೆ ಹುಂಡಿಯಲ್ಲಿ ವಿದೇಶಿ ಕರೆನ್ಸಿಗಳು, ತಾಳಿ, ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು, ನಿಷೇಧವಾಗಿರುವ ನೋಟುಗಳು, ವಾಚು ಸೇರಿದಂತೆ ಹಲವು ವಿವಿಧ ಬಗೆಯ ವಸ್ತುಗಳು, ಇತರೆ ಬೆಳ್ಳಿ ಪದಾರ್ಥಗಳನ್ನು ಕೂಡ ಭಕ್ತರು ದೇವಿಗೆ ಅರ್ಪಣೆ ಮಾಡಿದ್ದಾರೆ. 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ.
200 ಕ್ಕೂ ಅಧಿಕ ಮಂದಿ ಭಾಗಿ:
ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವಿದ್ಯಾರ್ಥಿಗಳು ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಮಧ್ಯಾಹ್ನದೊಳಗೆ ಹುಂಡಿ ಎಣಿಕೆ ಪೂರ್ಣಗೊಳಿಸಲಾಯಿತು. ನಂತರ ನಾಣ್ಯಗಳು ಹಾಗೂ ನೋಟುಗಳನ್ನು ವಿಂಗಡಿಸಿ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಲೆಕ್ಕ ಮಾಡಿ ದೇವಸ್ಥಾನದ ಖಾತೆಗೆ ಜಮಾ ಮಾಡಿಕೊಂಡರು.
ಹಿಂದಿನ ವರ್ಷಗಳ ಆದಾಯದ ವಿವರ
2013 ರಲ್ಲಿ 1.21 ಕೋಟಿ ರೂ.
2014 ರಲ್ಲಿ 1.27 ಕೋಟಿ ರೂ.
2015 ರಲ್ಲಿ 1.46 ಕೋಟಿ ರೂ.
2016 ರಲ್ಲಿ 2.67 ಕೋಟಿ ರೂ.
2017 ರಲ್ಲಿ 5.20 ಕೋಟಿ ರೂ.
2018 ರಲ್ಲಿ 2.64 ಕೋಟಿ ರೂ.
ತೃಪ್ತಿ ತಂದಿದೆ ಎಂದ ಎಸಿ ಮಾರುತಿ:
ಜಿಲ್ಲಾಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಈ ಬಾರಿ ಹಾಸನಂಬ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಹಿಂದಿನ ವರ್ಷಗಳಿಗಿಂತ ಈ ವರ್ಷ ಹೆಚ್ಚು ಆದಾಯ ಬಂದಿರುವುದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ತಾಯಿ ದರ್ಶನ ಪಡೆದಿದ್ದಾರೆ. ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಯಶಸ್ವಿಯಾಗಿ ಮಹೋತ್ಸವವನ್ನು ಪೂರ್ಣಗೊಳಿಸಿರುವ ತೃಪ್ತಿ ನನಗಿದೆ ಎಂದು ದೇವಸ್ಥಾನದ ಆಡಳಿತ ಅಧಿಕಾರಿ ಮತ್ತು ಹಾಸನ ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದರು.