ಹು-ಧಾ ಬೈಪಾಸ್ ಇನ್ನು ಷಟ್ಪಥ

BY PASS
Published on

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಬೈಪಾಸ್ 31 ಕಿಮೀ ರಸ್ತೆಯನ್ನು ಷಟ್ಪಥ ಎಕ್ಸ್​ಪ್ರೆಸ್ ಹೈವೇ ಆಗಿ ಮಾರ್ಪಡಿಸಲು ಹಾಗೂ 4 ಪಥದ ಸರ್ವಿಸ್ ರಸ್ತೆ ನಿರ್ವಿುಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಪಿಸಿ (ಇಂಜಿನಿಯರಿಂಗ್, ಪ್ರೊಕ್ಯೂರ್ವೆಂಟ್ ಆಂಡ್ ಕನ್​ಸ್ಟ್ರಕ್ಷನ್) ಮಾದರಿಯಲ್ಲಿ ಶುಕ್ರವಾರ ಟೆಂಡರ್ ಕರೆದಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ಟೆಂಡರ್ ಸಲ್ಲಿಕೆಗೆ ಫೆ. 22 ಕೊನೆಯ ದಿನವಾಗಿದೆ. ಕಾಮಗಾರಿ ಮುಗಿಸಲು ಎರಡೂವರೆ ವರ್ಷಗಳ ಸಮಯಾವಕಾಶ ನಿಗದಿ ಪಡಿಸಲಾಗಿದೆ. ನಿರ್ವಣದ ನಂತರ 5 ವರ್ಷಗಳ ಕಾಲ ನಿರ್ವಹಣೆಯನ್ನು ಗುತ್ತಿಗೆದಾರರೇ ನಿರ್ವಹಿಸುವ ಕರಾರನ್ನು ಟೆಂಡರ್​ನಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಿರುವ ಬೈಪಾಸ್​ನ ಎಲ್ಲ ಟೋಲ್ ಪ್ಲಾಜಾಗಳನ್ನು ತೆಗೆದು, 1 ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಒಂದು ಟೋಲ್ ಕೆಲಗೇರಿ ಮತ್ತು ನರೆಂದ್ರ ಮಧ್ಯೆ ಇರಲಿದೆ. ಇದರಿಂದ ಹುಬ್ಬಳ್ಳಿ - ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಟೋಲ್​ನಿಂದ ವಿನಾಯಿತಿ ಲಭ್ಯವಾಗಲಿದೆ. ಈ ಬೈಪಾಸ್ ನಿರ್ವಣದಿಂದ ನಗರದ ಮಧ್ಯೆ ಸಂಚರಿಸುವ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಈ ಯೋಜನೆ ಒಟ್ಟು 1200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯ ಗಬ್ಬೂರು ಎನ್​ಎಚ್ 4 ರಸ್ತೆಯ 402.6 ಕಿಮೀನಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ 433.2 ಕಿಮೀವರೆಗಿನ ಒಟ್ಟು 31 ಕಿಮೀ 6 ಪಥದ ಎಕ್ಸ್​ಪ್ರೆಸ್ ವೇ ಹಾಗೂ 4 ಪಥದ ಸರ್ವಿಸ್ ರಸ್ತೆ ನಿರ್ವಣಕ್ಕೆ 800 ಕೋಟಿ ರೂ. ವ್ಯಯಿಸಲಾಗುತ್ತದೆ. ಭೂ ಸ್ವಾಧೀನ ಡಿಪಿಆರ್ ತಯಾರಿಕೆ ಹಾಗೂ ಇನ್ನಿತರ ಕಾರ್ಯಕ್ಕೆ 400 ಕೋಟಿ ರೂ. ಅನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಹೇಳಿದ್ದಾರೆ.
ಈ ಬೈಪಾಸ್ ರಸ್ತೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಚಿವ ಪ್ರಲ್ಹಾದ ಜೋಶಿ ಅವರು ಅವಳಿ ನಗರದ ನಾಗರಿಕರ ಪರವಾಗಿ ಅಭಿನಂದಿಸಿದ್ದಾರೆ.
ಅಪಘಾತಕ್ಕೆ ಕಡಿವಾಣ: ‘ಬಾಟೆಲ್ ನೆಕ್’ನಂತಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ಮಾರ್ಗಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ.
ಇಕ್ಕಟ್ಟಾದ ಈ ಬೈಪಾಸ್ ರಸ್ತೆಯಲ್ಲಿ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿ, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ತುರ್ತಾಗಿ ಷಟ್ಪಥ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕೆಂಬ ಕೂಗು ದಶಕದಿಂದ ಕೇಳಿಬರುತ್ತಿತ್ತು. ಬೆಂಗಳೂರಿನಿಂದ ಬೆಳಗಾವಿ ರಸ್ತೆ ಸೇರಲು ಹುಬ್ಬಳ್ಳಿ-ಧಾರವಾಡ ಹೊರವಲಯದ ಬೈಪಾಸ್ ರಸ್ತೆ ಮೂಲಕ ವಾಹನಗಳು ಸಂಚರಿಸಬೇಕು. ಆದರೆ, ಗಬ್ಬೂರ ಕ್ರಾಸ್​ನಿಂದ ನರೇಂದ್ರ ಕ್ರಾಸ್​ವರೆಗಿನ ಸುಮಾರು 31 ಕಿಮೀ ಉದ್ದದ ರಸ್ತೆ ಇಕ್ಕಟ್ಟಾಗಿದೆ. ಈ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದು ಕಷ್ಟ. ಆದರೆ, ಬೆಂಗಳೂರು ಹಾಗೂ ಬೆಳಗಾವಿ ಮಾರ್ಗದ ಹೈವೇಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ವಾಹನಗಳು, ಈ ಬೈಪಾಸ್​ನಲ್ಲಿಯೂ ಅದೇ ವೇಗದಲ್ಲಿ ಸಂಚರಿಸಲು ಹೋಗಿ ಅಪಘಾತವಾಗುತ್ತಿದ್ದವು.
ಕಳೆದ ವರ್ಷ ಜ. 15ರಂದು ಈ ಬೈಪಾಸ್​ನ ಇಟಿಗಟ್ಟಿ ಕ್ರಾಸ್ ಬಳಿ ಎದುರಿನಿಂದ ಬರುತ್ತಿದ್ದ ಟ್ರಕ್​ಗೆ ಮಿನಿ ಬಸ್ ಡಿಕ್ಕಿ ಹೊಡೆದಿದ್ದರಿಂದ ಮಿನಿ ಬಸ್​ನಲ್ಲಿದ್ದ 11 ಮಹಿಳೆಯರು ಸಾವನ್ನಪ್ಪಿದ್ದನ್ನು ಸ್ಮರಿಸಬಹುದು.
ಪುಣೆ - ಬೆಂಗಳೂರು ಹೆದ್ದಾರಿ ವಿಸ್ತರಣೆ ಆಗಿದೆ. ಆದರೆ, ಹು - ಧಾ ಬೈಪಾಸ್ ವಿಸ್ತರಣೆ ಆಗಿಲ್ಲ. 6 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು, ಬೈಪಾಸ್​ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂಬ ತಜ್ಞರ ಅಭಿಪ್ರಾಯದೊಂದಿಗೆ ಬೈಪಾಸ್ ರಸ್ತೆ ಕನಿಷ್ಠ 6 ಪಥಗಳಿಗೆ ವಿಸ್ತರಣೆ ಆಗಬೇಕೆಂಬುದು ಸಚಿವ ಜೋಶಿಯವರ ಆಗ್ರಹವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net