ಹು-ಧಾ ಕಮಿಷನರೇಟ್​ನಲ್ಲಿ 52 ಪಾಸಿಟಿವ್ ಕೇಸ್

2 vikram 1A
Published on

ಹುಬ್ಬಳ್ಳಿ: ಎಲ್ಲೆಡೆ ಜನತಾ ಕರ್ಫ್ಯೂ ಇದೆ. ಆದರೆ, ಪೊಲೀಸರಿಗೆ ಮಾತ್ರ ಇದಾವುದು ಅನ್ವಯಿಸುವುದೇ ಇಲ್ಲ. ಏಕೆಂದರೆ, ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವವರೇ ಇವರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಬೇರೆ. ಕರೊನಾ ಎರಡನೇ ಅಲೆ ಬೀಸಿರುವ ಈ ಸಂದರ್ಭದಲ್ಲಿ ಇಂತಹ ಹೊಣೆ ಹಾಗೂ ಹೊರೆಯನ್ನು ಹೊತ್ತುಕೊಂಡ ಹುಬ್ಬಳ್ಳಿ- ಧಾರವಾಡದ ಪೊಲೀಸರ ಪೈಕಿ ಸಾಕಷ್ಟು ಮಂದಿ ಸೋಂಕಿನ ಅಪಾಯವನ್ನು ಎದುರಿಸುವಂತಾಗಿದೆ.

ಕಳೆದ ವರ್ಷ ಲಾಕ್​ಡೌನ್ ಅವಧಿಯಲ್ಲಿ ಅವಳಿ ನಗರದ ನೂರಾರು ಪೊಲೀಸರು ಕರೊನಾ ಸೋಂಕಿಗೆ ಒಳಗಾಗಿದ್ದರು. ಈ ಹೆಮ್ಮಾರಿಗೆ ಕೆಲವರು ಬಲಿಯಾಗಿದ್ದರು. ಈ ಬಾರಿಯೂ ಪೊಲೀಸರಿಗೆ ಸೋಂಕಿನ ಭೀತಿ ತಪ್ಪಿಲ್ಲ. ಎರಡನೇ ಅಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್​ನ 52 ಅಧಿಕಾರಿ, ಸಿಬ್ಬಂದಿಗೆ ಸೋಂಕು ತಗುಲಿದೆ.

ಡಿಸಿಪಿ (ಸಂಚಾರ ಮತ್ತು ಅಪರಾಧ) ಆರ್.ಬಿ. ಬಸರಗಿ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಅವರು ಈಗಾಗಲೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉತ್ತರ ಸಂಚಾರ ಠಾಣೆ ಇನ್​ಸ್ಪೆಕ್ಟರ್ ಶ್ರೀಕಾಂತ ತೊಟಗಿ, ಮಹಿಳಾ ಠಾಣೆ ಪಿಎಸ್​ಐ ಎಂ.ಸಿ. ಪಾಲೋಟಿ ಸೇರಿ ಕೆಲ ಪಿಎಸ್​ಐ, ಎಎಸ್​ಐ, ಹೆಡ್ ಕಾನ್​ಸ್ಟೇಬಲ್, ಕಾನ್​ಸ್ಟೇಬಲ್​ಗಳಿಗೆ ಕರೊನಾ ಸೋಂಕು ತಗುಲಿದೆ. ಬಹುತೇಕ ಎಲ್ಲರೂ ಚೇತರಿಕೆ ಹೊಂದುತ್ತಿರುವುದು ಸಮಾಧಾನಕರ ಸಂಗತಿ.

ನೈಟ್ ಕರ್ಫ್ಯೂ, ಜನತಾ ಕರ್ಫ್ಯೂ ಯಶಸ್ವಿಯಾಗಿ ಜಾರಿಯಾಗಬೇಕಾದರೆ ಪೊಲೀಸರು ಎಂದಿಗಿಂತಲೂ ಹೆಚ್ಚು ಶ್ರಮ ವಹಿಸಲೇಕಾಗುತ್ತದೆ. ಜನಜಾಗೃತಿ ಮೂಡಿಸುವುದು, ದಂಡ ವಿಧಿಸುವುದು, ಕಾನೂನು ಕ್ರಮ ಜರುಗಿಸುವುದು... ಹೀಗೆ ಹಲವು ರೀತಿಯ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ, ಹಗಲೂ ರಾತ್ರಿ ಸೇವೆ ಮಾಡಿದ್ದಾರೆ. ಸಾಕಷ್ಟು ಜನರ ಸಂಪರ್ಕಕ್ಕೂ ಬಂದಿದ್ದಾರೆ. ಇದರಿಂದಾಗಿ ಸೋಂಕು ತಗುಲುವ ಸಾಧ್ಯತೆಯನ್ನು ಎದುರಿಸಿದ್ದಾರೆ. ಹಲವರಿಗೆ ಸೋಂಕು ಕೂಡ ತಗುಲಿದೆ. ಆದರೂ ಪೊಲೀಸರು ಎದೆಗುಂದದೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ಆರಕ್ಷಕರ ಕೈಹಿಡಿದ ಲಸಿಕೆ: ಪೊಲೀಸ್ ಇಲಾಖೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕಡ್ಡಾಯವಾಗಿ ಕರೊನಾ ಲಸಿಕೆ ಪಡೆಯುವಂತೆ ಸೂಚಿಸಿತ್ತು. ಅದರಂತೆ ಬಹುತೇಕರು ಲಸಿಕೆ ಪಡೆದರು. ಲಸಿಕೆ ಪಡೆದ ಹಿನ್ನೆಲೆಯಲ್ಲಿ ಶೇ. 50ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿಗೆ ರೋಗ ಲಕ್ಷಣಗಳು ಇಲ್ಲ. ಹಲವರು ಹೋಮ್ ಐಸೋಲೇಶನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎನ್ನುತ್ತಾರೆ ಡಿಸಿಪಿ ಕೆ. ರಾಮರಾಜನ್.

ಜನರ ಸಹಕಾರ ಮುಖ್ಯ: ಕರೊನಾ ವಾರಿಯರ್ಸ್ ಪೊಲೀಸರು ಜನರ ರಕ್ಷಣೆಗಾಗಿ ರಸ್ತೆಗಿಳಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೂ ಅಪ್ಪ- ಅಮ್ಮ, ಹೆಂಡತಿ, ಮಕ್ಕಳು ಇದ್ದಾರೆ. ಊಟ, ನಿದ್ದೆ ಸರಿಯಾಗಿ ಆಗುತ್ತಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಅನಿವಾರ್ಯವಾಗಿ ಸೇವೆಗೆ ಹಾಜರಾಗುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರದೇ ಮನೆಯಲ್ಲಿದ್ದರೆ ಸಾಕು; ಎಲ್ಲರೂ ಸುರಕ್ಷಿತವಾಗಿರಬಹುದು ಎಂಬುದು ‘ವಿಜಯವಾಣಿ’ ಕಳಕಳಿ.

ಜಿಲ್ಲಾ ಪೊಲೀಸರಿಗೂ ವೈರಸ್ ಕಾಟ: ಧಾರವಾಡ ಜಿಲ್ಲಾ ಪೊಲೀಸ್ ಘಟಕದ 23 ಜಿಲ್ಲಾ ಪೊಲೀಸರಿಗೂ ಕರೊನಾ ಸೋಂಕು ತಗುಲಿದೆ. ಇನ್ನೂ ಹಲವರು ಕರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಿಳಿಸಿದ್ದಾರೆ.

ಎಚ್ಚರ ತಪ್ಪಿದರೆ ಅನಾಹುತ: ಕಳೆದ ವರ್ಷ ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಭಾರಿ ಮುನ್ನೆಚ್ಚರಿಕೆ ವಹಿಸಿತ್ತು. ಒಂದು ಪಾಸಿಟವ್ ಕೇಸ್ ಪತ್ತೆಯಾದರೂ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗುತ್ತಿತ್ತು. ಆದರೂ ಕಳೆದ ವರ್ಷ ಹಲವು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಕರೊನಾ ಬಲಿ ಪಡೆದಿತ್ತು. ಆದರೆ, ಈ ಬಾರಿ ಪೊಲೀಸ್ ಠಾಣೆಗಳಲ್ಲಿ ಅಷ್ಟೊಂದು ಮುನ್ನೆಚ್ಚರಿಕೆ ಕಂಡುಬರುತ್ತಿಲ್ಲ. ಮೇಲಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಹಲವು ಸಿಬ್ಬಂದಿಯ ಒತ್ತಾಸೆಯಾಗಿದೆ.

ಪೊಲೀಸರಿಗೆ ಸೋಂಕು ತಗುಲದಂತೆ ಈಗಾಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಲಾಗಿದೆ.| ಕೆ. ರಾಮರಾಜನ್, ಡಿಸಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net