ಹಿರೇಹಳ್ಳ ಯೋಜನೆಯಲ್ಲಿ ಭ್ರಷ್ಟಾಚಾರ

Ratnakar
Published on

ಕೊಪ್ಪಳ: ತಾಲೂಕಿನ ಹಿರೇಹಳ್ಳ ಯೋಜನೆಗೆ ಮುಳುಗಡೆಯಾದ ಗ್ರಾಮಗಳ ಪುನರ್ವಸತಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಲೋಕಾಯುಕ್ತ ದೂರು ಸಲ್ಲಿಸಲಾಗುವುದೆಂದು ನೀರಾವರಿ ಹಾಗೂ ಪುನರ್ವಸತಿ ಹೋರಾಟ ಸಮಿತಿ ಸಂಚಾಲಕ ಟಿ.ರತ್ನಾಕರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕುಕನೂರು ತಾಲೂಕಿನ ಅರಕೇರಿ ಬಳಿ ಹಿರೇಹಳ್ಳ ಜಲಾಶಯ ನಿರ್ಮಿಸಲಾಗಿದೆ. ಯೋಜನೆ ಲೋಕಾರ್ಪಣೆಯಾಗಿ 30 ವರ್ಷವಾದರೂ ಪುನರ್ವಸತಿ ಕೆಲಸ ಸಂಪೂರ್ಣವಾಗಿ ಮುಗಿದಿಲ್ಲ. ಕಾಲುವೆಗೆ ನೀರು ಹರಿದಿಲ್ಲ. ರೈತರಿಗೆ ನಿರೀಕ್ಷಿತ ಪ್ರಯೋಜನವಾಗುತ್ತಿಲ್ಲ. ಆದರೆ, ಯೋಜನೆ ಹೆಸರಿನಲ್ಲಿ ನೂರಾರು ಕೋಟಿ ರೂ. ವ್ಯಯಿಸಲಾಗುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಹಿನ್ನೀರಿನಲ್ಲಿ ಮುಳುಗಿದ ಅರಕೇರಾ, ವೀರಾಪುರ, ಮುತ್ತಾಳ ಮತ್ತು ಶಿರೂರು, ಮುದ್ಲಾಪುರ ಗ್ರಾಮಗಳು ಮುಳುಗಡೆಯಾಗಿವೆ. ಜನರು ಮನೆ, ಜಮೀನು ಇತರ ಆಸ್ತಿ ಕಳೆದುಕೊಂಡಿದ್ದಾರೆ. ಪುನರ್ವಸತಿಗಾಗಿ 60 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.


ಆದರೆ, ಉತ್ತಮ ರಸ್ತೆ, ಮನೆಗಳಾಗಿಲ್ಲ. ವಿದ್ಯುತ್ ಕಂಬ, ಚೆಕ್ ಡ್ಯಾಂಗಳು ಕಳಪೆಯಾಗಿವೆ. ಯೋಜನೆಗೆ ಸಂಬಂಧ ಇಲ್ಲದ ಕಾಮಗಾರಿಗಳಿಗೆ ಅನುದಾನ ಬಳಕೆ ಮಾಡಲಾಗಿದೆ. ಗುತ್ತಿಗೆದಾರರು, ಅಧಿಕಾರಿಗಳು ಶಾಮೀಲಾಗಿ ಮನಬಂದಂತೆ ಬಿಲ್ ಎತ್ತುವಳಿ ಮಾಡಿದ್ದಾರೆ. ಫಿಲ್ಲರ್ ಇಲ್ಲದೆ ಕಾಂಪೌಂಡ್ ನಿರ್ಮಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಜನರಿಗೆ ನ್ಯಾಯ ಕೊಡಿಸಬೇಕು. ಇಲ್ಲಿದಿದ್ದರೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗವುದೆಂದು ತಿಳಿಸಿದರು. ಗ್ರಾಮಸ್ಥರಾದ ಈಶಪ್ಪ ಹರಿಜನ, ಯಮನೂರಪ್ಪ ಗೊರ್ಲೆಕೊಪ್ಪ, ಪರಶುರಾಮ ಸಕ್ರಣ್ಣನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net