

ತೂಬಗೆರೆ: ಚಿರತೆ ಹಾವಳಿ ತಡೆಗಟ್ಟುವಂತೆ ಒತ್ತಾಯಿಸಿ, ಚಿರತೆ ದಾಳಿಗೆ ಸಾವನಪ್ಪಿದ್ದ ಕುರಿ ತಂದು ತಾಲೂಕು ಕಚೇರಿ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿರುವ ಸುದ್ದಿ ತಿಳಿದ ತಹಸೀಲ್ದಾರ್ ಮೋಹನಕುಮಾರಿ ಮಂಗಳವಾರ ಹಿರೇಮುದ್ದೇನಹಳ್ಳಿ ಗ್ರಾಮಕ್ಕೆ ದೌಡಾಯಿಸಿ ರೈತರ ಸಮಸ್ಯೆ ಆಲಿಸಿದರು.
ಸೋಮವಾರ ಗ್ರಾಮದ ಚಿಕ್ಕ ನರಸಿಂಹಯ್ಯಅವರ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ, ಕುರಿಯೊಂದನ್ನು ಬಲಿ ಪಡೆದಿತ್ತು. ಇದರಿಂದ ಆಕ್ರೋಶಗೊಂಡ ರೈತರು, ಸತ್ತ ಕುರಿ ತಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು.
ತಹಸೀಲ್ದಾರ್ ಮೋಹನಕುಮಾರಿ, ಜಿಪಂ ಮಾಜಿ ಸದಸ್ಯ ಎಚ್. ಅಪ್ಪಯ್ಯಣ್ಣ, ವಲಯ ಅರಣ್ಯಾಧಿಕಾರಿ ಮುನಿರಾಜು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೆ ಚಿರತೆ ಸೆರೆಹಿಡಿಯಲು ಹೆಚ್ಚುವರಿ ಬೋನು ಅಳವಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಹಸೀಲ್ದಾರ್ ಸೂಚಿಸಿದರು. ಜನರ ಸಮಸ್ಯೆ ನನ್ನ ಅರಿವಿಗೆ ಬಂದಿದೆ. ಆದ್ದರಿಂದಲೇ ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಪರಿಶೀಲಿಸಲಾಗಿದೆ, ರೈತರು ಆತಂಕಪಡಬೇಕಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸ್ಥರ ಅಳಲು: ಇತ್ತೀಚಿಗೆ ಚಿರತೆ ದಾಳಿಯಿಂದ 10ಕ್ಕೂ ಹೆಚ್ಚು ಜಾನುವಾರು ಬಲಿಯಾಗಿದ್ದು, ಜಮೀನುಗಳಲ್ಲಿ ಕೆಲಸಕ್ಕೆ ತೆರಳಲು ಭಯಪಡುವಂತಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೈನುಗಾರಿಕೆಯಿಂದಲೇ ಹಿಂದೆ ಸರಿಯಬೇಕಾಗುತ್ತದೆ. ಅಲ್ಲದೆ ಜೀವಭಯದಲ್ಲೇ ದಿನದೂಡುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಚಿರತೆ ಹಿಡಿಯಲು ಬೋನು ಇಟ್ಟಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಚಿರತೆ ಸೆರೆಹಿಡಿದಿಲ್ಲ ಎಂದು ದೂರಿದರು.
ಈ ವ್ಯಾಪ್ತಿಯ ರೈತರ ಸಮಸ್ಯೆ ಮನವರಿಕೆಯಾಗಿದೆ. ಚಿರತೆ ಉಪಟಳ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಚಿರತೆ ದಾಳಿಯಿಂದ ನಷ್ಟಕ್ಕೆ ಒಳಗಾದ ರೈತನಿಗೆ ಶೀಘ್ರ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು. ಮೋಹನ್‌ಕುಮಾರಿ, ತಹಸೀಲ್ದಾರ್ ಚಿರತೆ ಹಾವಳಿ ಇತ್ತೀಚಿಗೆ ಹೆಚ್ಚಾಗಿದೆ, ಜಾನುವಾರುಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ, ಇದರಿಂದ ಆತಂಕದಲ್ಲೇ ಹೈನುಗಾರಿಕೆ ಮಾಡುವಂತಾಗಿದೆ, ಚಿರತೆಗಳನ್ನು ಸೆರೆಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ಮನುಷ್ಯರೂ ಬಲಿಯಾಗಬೇಕಾಗುತ್ತದೆ, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಚಿಕ್ಕನರಸಿಂಹಯ್ಯ, ರೈತ