ಹಿರೇಮಸಳಿಯಲ್ಲಿ ಗುರುವಂದನೆ, ಹಳೆಯ ವಿದ್ಯಾರ್ಥಿಗಳ ಸ್ಮರಣೆಗೆ ಶಿಕ್ಷಕರು ಭಾವುಕ !

1663067196385
Published on

ವಿಜಯಪುರ: ಅಕ್ಷರ ಕಲಿಸಿದ ಗುರುಗಳ ನಿವೃತ್ತಿ ಹಿನ್ನೆಲೆ ‘ಗುರು ವಂದನೆ’ ಸಲ್ಲಿಸಲು ನಾಡಿನ ನಾನಾ ಭಾಗಗಳಿಂದ ಆಗಮಿಸಿದ ವಿದ್ಯಾರ್ಥಿ ಬಳಗದ ಆದರಾತಿಥ್ಯ, ಗೌರವ, ಗುರುಭಕ್ತಿಗೆ ಶಿಕ್ಷಕರು ಭಾವುಕರಾದ ಸನ್ನಿವೇಶ ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಕಂಡು ಬಂದಿತು.

ಗ್ರಾಮದ ವಿದ್ಯಾಜ್ಯೋತಿ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸೋಮವಾರ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 1994ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಯಿಂದ ತೇರ್ಗಡೆಯಾದ ವಿದ್ಯಾರ್ಥಿಗಳು ಶಿಕ್ಷಕರಾದ ಆರ್.ಬಿ. ಸೌದಾಗರ ಹಾಗೂ ಬಿ.ಪಿ. ತಳವಾರ ಗುರುಗಳಿಗೆ ಗುರುವಂದನೆ ಸಲ್ಲಿಸಿದರು. ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಗುರುವಿನ ಕಾಲಿಗೆ ನಮಸ್ಕರಿಸಿದರು. ಇಂಥ ಅಪರೂಪದ ಘಳಿಗೆ ನೆನೆದು ಶಿಕ್ಷಕರು ಧನ್ಯತಾ ಭಾವ ಮೆರೆದರು.

ಶಿಕ್ಷಕ ಆರ್.ಬಿ. ಸೌದಾಗರ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕಲಿತು ತೇರ್ಗಡೆಯಾಗಿದ್ದಾರೆ. ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂದು ನಿವೃತ್ತಿ ಸಮಯದಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಸಾರ್ಥಕತೆ ಹಾಗೂ ಸಂತೃಪ್ತಿ ತರಿಸಿದೆ ಎಂದರು.

ಇನ್ನೋರ್ವ ಶಿಕ್ಷಕ ಬಿ.ಪಿ. ತಳವಾರ ಮಾತನಾಡಿ ವಿದ್ಯಾರ್ಥಿಗಳ ಕಾಳಜಿ ಹಾಗೂ ಭಕ್ತಿಗೆ ಪ್ರತಿಯಾಗಿ ಅಭಿನಂದನೆ ಸಲ್ಲಿಸಿ ಶುಭಕೋರಿದರು.

ವಿದ್ಯಾರ್ಥಿನಿಯರಾದ ಮಂಗಲಾ ವಾಗಮೋರೆ ಹಾಗೂ ದ್ರಾಕ್ಷಾಯಿಣಿ ಮಾದನಶೆಟ್ಟಿ ಮಾತನಾಡಿ, ಬಾಲ್ಯದಲ್ಲಿ ಗುರುಗಳು ನೀಡಿದ ಶಿಕ್ಷಣ, ಸಂಸ್ಕಾರದಿಂದಾಗಿ ಇಂದು ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯಲು ಸಹಾಯವಾಯಿತು. ಗುರುಗಳಂತೆಯೇ ಶಿಕ್ಷಕ ವೃತ್ತಿ ಆಯ್ದುಕೊಂಡು ಸರ್ಕಾರಿ ಹುದ್ದೆ ಅಲಂಕರಿಸಿ ನೂರಾರು ಮಕ್ಕಳಿಗೆ ಪಾಠ ಮಾಡಲು ಆರ್.ಬಿ. ಸೌದಾಗರ ಹಾಗೂ ಬಿ.ಪಿ. ತಳವಾರ ಗುರುಗಳೇ ಪ್ರೇರಣೆ ಎಂದರು.

ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಅಂದು ಗುರುಗಳು ಎದೆಯಲ್ಲಿ ಬಿತ್ತಿದ ಅಕ್ಷರಗಳೇ ಇಂದು ಪತ್ರಿಕಾ ವೃತ್ತಿಯಲ್ಲಿ ಕೈಹಿಡಿದು ಮುನ್ನಡೆಸುತ್ತಿವೆ. ಅವರ ಋಣ ತೀರಿಸಲಾಗದು ಎಂದರು.

ಲಕ್ಷ್ಮಣ ಭಾವಿಕಟ್ಟಿ ಅಭಿಪ್ರಾಯ ಹಂಚಿಕೊಂಡರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ತಿಪ್ಪಣ್ಣ ಶಿರಕನಳ್ಳಿ, ವಿದ್ಯಾರ್ಥಿಗಳಾದ ಬಸವರಾಜ ಪಟ್ಟಣಶೆಟ್ಟಿ, ಶ್ರೀಶೈಲ ಮಲಕಗೊಂಡ, ಸಂತೋಷ ದೇಗಿನಾಳ, ಶ್ರೀಶೈಲ ಮಲಕಗೊಂಡ, ಯಲ್ಲಪ್ಪ ಕ್ಷತ್ರಿ, ಶಿವಾನಂದ ಕ್ಷತ್ರಿ, ಲಕ್ಷ್ಮಿ ಪಟ್ಟಣಶೆಟ್ಟಿ, ಕವಿತಾ ಹಿಪ್ಪರಗಿ, ಶೈಲಾ ಹತ್ತಿ, ಲಕ್ಷ್ಮಿಬಾಯಿ ಉಪ್ಪಾರ, ಶಿವಲೀಲಾ, ನೀಲಮ್ಮ ಭಾವಿಕಟ್ಟಿ, ಹಾಜರಾ ಜಮಾದಾರ, ವೈಶಾಲಿ ರೊಟ್ಟಿ, ರಜಾಕ ಮುಜಾವರ, ಸತ್ತಾರ್ ಸೌದಾಗರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net