

ಭಾಲ್ಕಿ: ಗಡಿ ಭಾಗದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನದ ಮೂಲಕ ಸಲ್ಲಿಸುತ್ತಿರುವ ಸಮಾಜ ಸೇವೆ ಮಾದರಿ ಎಂದು ಗದಗನ ಹಿರಿಯ ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಅಮರಾವತಿ ಹಿರೇಮಠ ಪ್ರತಿಷ್ಠಾನ ವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪೂಜ್ಯರು ಸ್ವಾತಂತ್ರ್ಯ ಪೂರ್ವದಲ್ಲಿ ಈ ಭಾಗದಲ್ಲಿ ಶಿಕ್ಷಣದ ಕಾವೇರಿಯನ್ನು ಹರಿಸಿದರು ಎಂದರು.
ಪಟ್ಟದ್ದೇವರು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಬಡವರು, ನಿರ್ಗತಿಕರು ಮತ್ತು ನಿರಾಶ್ರಿತರಿಗೆ ಪ್ರಸಾದ ನಿಲಯದಲ್ಲಿ ಉಚಿತವಾಗಿ ಊಟ, ವಸತಿ ಕೊಡುವ ಮೂಲಕ ಅವರ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಈ ಭಾಗದ ಸಮಗ್ರ ಬೆಳವಣಿಗೆಗೆ ಶ್ರೀಗಳು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಪೂಜ್ಯರ ಹೆಸರಿನ ಪ್ರಶಸ್ತಿಯನ್ನು ನನಗೆ ದೊರೆತಿರುವುದು ಅತ್ಯಂತ ಆನಂದವುಂಟು ಮಾಡಿದೆ ಎಂದು ಹರ್ಷವ್ಯಕ್ತ ಪಡಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ನ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ, ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಸ್ ಬದೋಲೆ ಪ್ರಶಸ್ತಿ ಪ್ರದಾನ ಮಾಡಿದರು. ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಟಾನದ ಅಧ್ಯಕ್ಷೆ ಡಾ.ಮಕ್ತುಂಬಿ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೈರಾಜ ಖಂಡ್ರೆ ಬಸವ ಗುರುವಿನ ಪೂಜೆ ನೆರವೇರಿಸಿದರು.
ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಸೂರ್ಯಕಾಂತ ಬಿರಾದಾರ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಬನ್ನಾಳೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಗುಂಡಪ್ಪ ಸಂಗಮಕರ್, ಶಿವಕುಮಾರ ಸಾಲಿ ಇತರರಿದ್ದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್, ಶಿವಲಿಂಗ ಯರಗಲ್ಲ ವಚನ ಸಂಗೀತ ನಡೆಸಿ ಕೊಟ್ಟರು. ದೀಪಕ್ ಠಮಕೆ ನಿರೂಪಣೆ ಮಾಡಿದರು. ಬಸವರಾಜ ಮರೆ ವಂದಿಸಿದರು.
ಕೋಟ್
ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರ ಶಿಕ್ಷಣ ಮತ್ತು ಸಾಹಿತ್ಯ ಸೇವೆ ಅನುಪಮವಾಗಿದೆ. ಪೂಜ್ಯರ ಹೆಸರಿನಲ್ಲಿ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ನೀಡುತ್ತಿರುವುದು ಖುಷಿ ತಂದಿದೆ.
| ಶ್ರೀ ಗುರುಬಸವ ಪಟ್ಟದ್ದೇವರು
ಹಿರೇಮಠ ಸಂಸ್ಥಾನದ ಪೀಠಾಧಿಪತಿ