

ಕಳಸ: ತಾಲೂಕಿನ ಹಿರೇಬೈಲು ಸಮೀಪ ರಾಜ್ಯ ಹೆದ್ದಾರಿಗೆ ಧರೆ ಕುಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಚಾರ ಸ್ಥಗಿತವಾಗಿತ್ತು. ಕಳಸ ಭಾಗದಲ್ಲಿ ಪ್ರತಿದಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ಹೆದ್ದಾರಿಗೆ ಧರೆ ಕುಸಿದಿದೆ. ಪರಿಣಾಮ ಮೂರು ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಈ ಸಂದರ್ಭ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ನಂತರ ಸ್ಥಳೀಯರೇ ರಸ್ತೆಯ ಮಣ್ಣನ್ನು ತೆರವು ಮಾಡಿದರು. ಮೂರು ವರ್ಷಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಗುಡ್ಡ ಜರಿದಿತ್ತು. ಈಗ ಪುನಃ ಇದೇ ಗುಡ್ಡ ಜರಿದಿದೆ. ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.