ಹಿರೇಬಾಗೆವಾಡಿಯಲ್ಲಿ ‘ಗೃಹಲಕ್ಷ್ಮೀ’ ಯೋಜನೆ ಸೌಲಭ್ಯ ವಿತರಣೆ ಕಾರ್ಯಕ್ರಮ ಆ.30 ರಂದು

LAXMI HEBBALKAR
Published on

ಬೆಳಗಾವಿ ಜಿಲ್ಲೆಗೆ 195.63 ಕೋಟಿ ರೂ.1ನೇ ಹಂತದ ಅನುದಾನ ಬಿಡುಗಡೆ

ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯನ್ನು ಅ. 30 ರಂದು ಮೈಸೂರಿನಲ್ಲಿ ಮುಖ್ಯಮಂತ್ರಿಗಳು,ಉಪಮುಖ್ಯಮಂತ್ರಿಗಳು, ಇಲಾಖಾ ಸಚಿವರು ಹಾಗೂ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ Two Way Interaction ಮಾಡಲು ಬೆಳಗಾವಿ ತಾಲೂಕು ಹಿರೇಬಾಗೆವಾಡಿಯ ಶಿವಾಲಯ ಕಲ್ಯಾಣ ಮಂಟಪ ಹಾಗೂ ಬೆಳಗಾವಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬುಧವಾರ (ಆ.30) ಬೆಳಿಗ್ಗೆ 11.30 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಕಾರ್ಯಕ್ರಮಕ್ಕೆ ಎಲ್ಲಾ ಫಲಾನುಭವಿಗಳು, ಸಾರ್ವಜನಿಕರು ಭಾಗಿಯಾಗಲು ಹಾಗೂ ಪ್ರತಿ ಗ್ರಾಮ ಪಂಚಾಯತ ಹಂತದಲ್ಲಿ ಮೈಸೂರಿನಿಂದ ಕಾರ್ಯಕ್ರರ್ಮದ ನೇರ ಪ್ರಸಾರವನ್ನು ವೀಕ್ಷಿಸಲು ಒಂದು ಟಿವ್ಹಿ/ಎಲ್.ಇ.ಡಿ ಪರದೆ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ 2000 ಫಲಾನುಭವಿಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ಚುನಾಯಿತ ಪ್ರತಿ ನಿಧಿಗಳು, ಸಂಸದರು, ಪರಿಷತ್ ಸದಸ್ಯರು ಎಲ್ಲರನ್ನು ಆಹ್ವಾನಿಸಿ ಯೋಜನೆಗೆ ಚಾಲನೆಯನ್ನು ನೀಡುವಂತೆ ಕ್ರಮವಹಿಸಲಾಗಿದೆ. Two Way Interaction ಆಯೋಜಿಸಿದ ಸ್ಥಳಗಳಲ್ಲಿ ತಾಂತ್ರಿಕ ಸಲಹೆಗಾರರ ಸಹಾಯದೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಮಗಳಲ್ಲಿಯೂ ಆ.30 ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮ ನಡೆಯುವ ಪ್ರತಿಯೊಂದು ಸ್ಥಳದಲ್ಲಿಯೂ ಹಬ್ಬದ ವಾತಾವರಣ ಮೂಡಿಸಿ ಪ್ರತಿಯೊಂದು ಮನೆಯ ಮುಂದೆ ನಾನೇ ಯಜಮಾನಿ ನಾನೇ ಗೃಹಲಕ್ಷ್ಮೀ ಎಂಬ ಧ್ಯೇಯ ವಾಕ್ಯದ ರಂಗೋಲಿ ಬಿಡಿಸುವಂತೆ ತಿಳಿಸಲಾಗಿದೆ. ರಾಜ್ಯದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಕುಟುಂಬದ ನಿರ್ವಹಣೆಯ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಅ.30 ರಂದು ರಾಜ್ಯಾದ್ಯಾಂತ ಏಕಕಾಲಕ್ಕೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 500 ಗ್ರಾಮ ಪಂಚಾಯತಿಗಳಲ್ಲಿ ಹಾಗೂ 39 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗುವುದು.

ಜಿಲ್ಲೆಯಲ್ಲಿ ಒಟ್ಟು 1187469 ಮಹಿಳೆಯರು ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಹರಿದ್ದು, ಇಲ್ಲಿಯವರೆಗೆ 997460 ಕುಟುಂಬದ ಯಜಮಾನಿ ಮಹಿಳೆಯರು ನೊಂದಣಿಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ. 84 ರಷ್ಟು ಸಾಧನೆಯನ್ನು ಮಾಡಲಾಗಿದೆ. ಜಿಲ್ಲೆಗೆ ಮೊದಲ ಹಂತದ ಅನುದಾನ ರೂ. 195.63 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ ಇಲ್ಲಿಯವರೆಗೆ 172.00 ಕೋಟಿ ಆರ್ಥಿಕ ಸಾಧನೆಯನ್ನು ಸಾಧಿಸಲಾಗಿದೆ. ಒಟ್ಟು 860000 ಫಲಾನುಭವಿಗಳಿಗೆ 2000 ರೂ.ಗಳ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಆರ್. ನಾಗರಾಜ ಅವರು ತಿಳಿಸಿರುತ್ತಾರೆ.
ಯೋಜನೆಯ ಅಧಿಕೃತ ಚಾಲನೆಯ ಪೂರ್ವಭಾವಿ ಸಿದ್ದತೆ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಬೆಳಗಾವಿ ಇವರು ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳಿಗೆ ಸಭೆ ನಡೆಸಿ ಪೂರ್ವಬಾವಿ ಸಿದ್ದತೆಯನ್ನು ಮಾಡಿಕೊಳ್ಳುವ ಕುರಿತು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಅಧೀಕೃತ ಚಾಲನೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net