ಹಿರೇಕೊಡಿಗೆ ಪಿಡಿಒಗಳ ವಿರುದ್ಧ ತನಿಖೆ ಚುರುಕು

Published on

ಕೊಪ್ಪ: ಹಿರೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ಕ್ಲರ್ಕ್ ಕಂ ಡೇಟಾ ಎಂಟ್ರಿ ಹುದ್ದೆ ನೇಮಕಾತಿಗೆ ಅಕ್ರಮ ಕ್ರಮ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.

ಕ್ಲರ್ಕ್ ಕಂ ಡೇಟಾ ಎಂಟ್ರಿ ಹುದ್ದೆಗೆ ಸಂಬಂಧಿಸಿದಂತೆ ಹಿರೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯ ನಡಾವಳಿ ತಿದ್ದುಪಡಿ ಪ್ರಕರಣ ಸಂಂಬಂಧ ವಿಜಯವಾಣಿ ಜು.18ರಂದು ಡೇಟಾ ಎಂಟ್ರಿ ಹುದ್ದೆಗೆ ನಡಾವಳಿ ತಿದ್ದುಪಡಿ! ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ತಾಪಂ ಇಒ ನವೀನ್‌ಕುಮಾರ್ ಸೋಮವಾರ ಹಿರೇಕೊಡಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು ಹಾಗೂ ಕಡತವನ್ನು ತಾಪಂ ಕಚೇರಿಗೆ ತರಲಾಗಿದೆ.

2015ರಿಂದ ಇಲ್ಲಿಯವರೆಗೂ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿರುವ ಪಿಡಿಒಗಳು ಜು.23ರಂದು ತಾಪಂ ಕಚೇರಿಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಒಟ್ಟು ನಾಲ್ವರು ಪಿಡಿಒಗಳು ಸೇವೆ ಸಲ್ಲಿಸಿದ್ದರು. ನಾಲ್ವರಿಂದ ಪ್ರಕರಣಕ್ಕೆ ಸಂಬಂಧಿಸಿದ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹಾಲಿ ಪಿಡಿಒ ಪದ್ಮಾಲತಾ ಅವರನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸುವಂತೆ ಒತ್ತಾಯ ಕೇಳಿಬರುತ್ತಿದೆ. ತನಿಖಾ ತಂಡ ಎರಡು ಹಂತಗಳಲ್ಲಿ ತನಿಖೆ ನಡೆಸಲು ಯೋಚಿಸುತ್ತಿದೆ ಎಂದು ಪತ್ರಿಕೆಗೆ ಬಲ್ಲಮೂಲಗಳಿಂದ ಮಾಹಿತಿ ಲಭಿಸಿದೆ. ಪಿಡಿಒಗಳ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಪಡೆದು ಹಾಲಿ ಪಿಡಿಒ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆಗೆ ಒಳಪಡಿಸುವುದು ಅಥವಾ ಬೇರೆಡೆ ವರ್ಗಾಯಿಸಿ ಇಲಾಖೆ ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net