ಹಿರೀಸಾವೆ: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎಚ್.ಇ.ಬೋರಣ್ಣ, ಉಪಾಧ್ಯಕ್ಷೆಯಾಗಿ ಚಂದ್ರಮ್ಮ ರಾಮಾಚಾರಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ 2ನೇ ಅವಧಿಗೆ ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಹಿರೀಸಾವೆಯ ಎಚ್.ಇ.ಬೋರಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಮ್ಮ ರಾಮಾಚಾರಿ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಪಂಚಾಯತ್‌ರಾಜ್ ಇಂಜಿನಿಯರ್ ವಿಭಾಗದ ಎಇಇ ಆನಂದ್ ಅವಿರೋಧ ಆಯ್ಕೆ ಪ್ರಕಟಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾಪಂ ಸದಸ್ಯರು ಅಭಿನಂದಿಸಿದರು. ಮುಖಂಡರು, ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಸೊಸೈಟಿ ಮಾಜಿ ಅಧ್ಯಕ್ಷ ನಾಗೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ ಮಂಜುನಾಥ್, ಮಹೇಶ್, ಸುನೀತಾ ಬೋರೇಗೌಡ, ಸದಸ್ಯರಾದ ಪರಮೇಶ್, ಚೇತನ್, ಬಸವರಾಜ್, ಲೋಕೇಶ್, ಪಿಡಿಒ ಕೆ.ಜೆ.ಸತೀಶ್ ಇತರರು ಇದ್ದರು.