

ಮೈಸೂರು: ಅನುಭವ ಮಂಟಪದಂತಿರುವ ಹಿರಿಯರು ಸರ್ಕಾರ ಮತ್ತು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜಯಲಕ್ಷ್ಮೀಪುರಂನ ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಮತ್ತು ಹಿರಿಯ ನಾಗರಿಕರ ಮಂಡಳಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು
ಹಿರಿಯ ನಾಗರಿಕರ ಮಂಡಳಿ ಕೇವಲ ಸಭೆ, ಸಮಾರಂಭ, ಆರೋಗ್ಯ ಶಿಬಿರಗಳಿಗೆ ಸೀಮಿತವಾಗಬಾರದು. ಇದಕ್ಕೆ ಹೊಸ ಸ್ವರೂಪ ನೀಡಬೇಕು. ವಿವಿಧ ವೃತ್ತಿಗಳಲ್ಲಿ ತಾವು ಸಲ್ಲಿಸಿರುವ ಸೇವೆಯ ಅನುಭವದ ಆಧಾರದ ಮೇಲೆ ಸರ್ಕಾರ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಮಾಡಿ, ಸರಿದಾರಿಯಲ್ಲಿ ಸಾಗುವಂತೆ ಮಾಡಬೇಕು ಎಂದರು.
ಅನುಭವ ಎಷ್ಟು ಮುಖ್ಯ ಎಂಬುದಕ್ಕೆ ರಾಜೀವ್ ಗಾಂಧಿ ಅವರು ಹೊಸದಾಗಿ ಪ್ರಧಾನಿಯಾದಾಗ ಹಿರಿಯ ಐಎಎಸ್ ಅಧಿಕಾರಿ ಎ.ಆರ್. ವೆಂಕಟೇಶನ್ ಅವರು ಹೇಳಿದ್ದ ‘ಬೇರೆಯವರಿಂದ ಆಸ್ತಿ ಬರಬಹುದು, ಅಂತಸ್ತು ಬರಬಹುದು. ಆದರೆ, ಅನುಭವ ಮಾತ್ರ ಸ್ವಂತದ್ದೇ ಆಗಿರುತ್ತದೆ’ ಎಂಬ ಮಾತನ್ನು ಉಲ್ಲೇಖಿಸಿದರು.
ಲಂಡನ್‌ನಲ್ಲಿ ವಾರಕ್ಕೊಮ್ಮೆ ಹಿರಿಯ ನಾಗರಿಕರು ಏನೇ ಖರೀದಿಸಿದರೂ ಶೇ.25ರಷ್ಟು ರಿಯಾಯಿತಿ ಇದೆ. ಅವರು ಪ್ರತಿ ಬುಧವಾರ ಎಲ್ಲಿ ಬೇಕಾದರೂ ಹೋಗಬಹುದು. ನಮ್ಮಲ್ಲಿ ಕೂಡ ಆ ರೀತಿಯ ವ್ಯವಸ್ಥೆ ಬರಬೇಕು. ಹಿರಿಯ ನಾಗರಿಕರ ಸಮಸ್ಯೆ ಮತ್ತು ಸಲಹೆಗಳ ಬಗ್ಗೆ ಸರ್ಕಾರ ಕೂಡ ಗಮನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಶಾಸನಸಭೆಗೆ ಹೋಗುವ ಶಾಸಕರ ಓದಿಕೊಳ್ಳುವುದಿಲ್ಲ. ಐಎಎಸ್ ಅಧಿಕಾರಿಗಳು ಕೂಡ ಹೇಳುವುದಿಲ್ಲ. ರಾಜ್ಯದ ಬಜೆಟ್ ಗಾತ್ರ 2.47 ಲಕ್ಷ ಕೋಟಿ ರೂ.ಗಳಿಗೆ ಹಿಗ್ಗಲು ಎಸ್.ಎಂ. ಕೃಷ್ಣ ಅವರು ಐಟಿ-ಬಿಟಿಗೆ ಕೊಟ್ಟ ಉತ್ತೇಜನ ಕಾರಣ ಎಂಬುದನ್ನು ಮರೆಯಬಾರದು ಎಂದರು.
ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಮಂಡಳಿಗೆ 5 ಲಕ್ಷ ರೂ. ಅನುದಾನ ನೀಡವುದಾಗಿ ವಿಶ್ವನಾಥ್ ಭರವಸೆ ನೀಡಿದರು. ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿದರು.
ಹಿರಿಯ ಸದಸ್ಯರಾದ ಡಾ.ಸಿ.ಎಂ. ಮುನಿರಾಯಪ್ಪ, ಡಾ.ಎಚ್.ಎಂ.ನಾಗರಾಜು, ಡಾ.ಎ.ವಿ. ನರಸಿಂಹಮೂರ್ತಿ, ಸಿ.ವಿ. ಗೋಪಿನಾಥ್ ಹಾಗೂ ಮಂಜುಳಾ ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ತಿಲಕ್‌ನಗರ ಸರ್ಕಾರಿ ಅಂಧರ ಶಾಲೆಯ ಪ್ರಾಂಶುಪಾಲ ಸತೀಶ್ ಅವರನ್ನು ಗೌರವಿಸಿ, ಮಂಡಳಿಯಿಂದ 1001 ರೂ. ದೇಣಿಗೆ ನೀಡಲಾಯಿತು.
ಸನ್ಮಾನಿತರ ಪರವಾಗಿ ಪ್ರೊ.ಎ.ವಿ. ನರಸಿಂಹಮೂರ್ತಿ ಮಾತನಾಡಿದರು. ಹಿರಿಯ ನಾಗರಿಕರ ಸೇವಾ ಪ್ರತಿಷ್ಠಾನವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಸ್.ವಿ. ಗೌಡಪ್ಪ, ಹಿರಿಯ ನಾಗರಿಕರ ಮಂಡಳಿ ಅಧ್ಯಕ್ಷ ಕೃಷ್ಣಪ್ಪಗೌಡ , ಮುಖಂಡರಾದ ಎಸ್.ವಿ. ವೆಂಕಟೇಶಯ್ಯ, ಡಾ.ರಾಮಚಂದ್ರೇಗೌಡ, ಕೃಷ್ಣಮೂರ್ತಿ, ಕೃಷ್ಣ , ರಾಮನಾಥ್ ಇತರರು ಇದ್ದರು.