

ಸಾಗರ: ಹಿರಿಯರನ್ನು ಗೌರವದಿಂದ ಕಾಣುವ ಜತೆ ಅವರ ಜತೆ ಪ್ರೀತಿ, ವಿಶ್ವಾಸದಿಂದ ಇರಬೇಕು. ಹಿರಿಯರನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ ಹೇಳಿದರು.
ಸಾಗರದ ಶೃಂಗೇರಿ ಶಂಕರಮಠದಲ್ಲಿ ನಿವೃತ್ತ ನೌಕರರ ಸಂಘದಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಅವಿಭಕ್ತ ಕುಟುಂಬ ವ್ಯವಸ್ಥೆ ದೂರವಾಗಿ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ವಿನಃ ಮಾನಸಿಕವಾಗಿ ಹಿರಿಯರನ್ನು ಗೌರವದಿಂದ ಕಾಣಬೇಕು ಎನ್ನುವ ಮನೋಭಾವ ಕಿರಿಯರಲ್ಲಿ ಜಾಗೃತವಾಗುತ್ತಿಲ್ಲ. ಮಕ್ಕಳು ಕೊನೆಗಳಿಗೆಯಲ್ಲಿ ತಮ್ಮ ಜತೆ ಇರಬೇಕು ಎನ್ನುವ ಕೂಗು ತಂದೆ, ತಾಯಿಯದ್ದಾಗಿರುತ್ತದೆ. ಆದರೆ ನಾವೇ ಅವರನ್ನು ಇಂಜಿನಿಯರ್, ಡಾಕ್ಟರ್ ಓದಿಸುತ್ತೇವೆ. ಉದ್ಯೋಗ ಅರಸಿ ಹೊರಡುತ್ತಾರೆ. ಇದರಿಂದ ವೃದ್ಧಾಶ್ರಮಗಳ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ತಿಳಿಸಿದರು.
ಅಕ್ಷರಸ್ಥರೆ ಹೆಚ್ಚು ತಂದೆ, ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಅನಕ್ಷರಸ್ಥರು ಹಳ್ಳಿಗಾಡು ಪ್ರದೇಶದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಎಲ್ಲೋ ಒಂದು ಕಡೆ ನಮ್ಮ ಶಿಕ್ಷಣ ಸಹ ಹಿರಿಯರನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ಕಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಗರ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಹಿರಿಯರು ನಮ್ಮ ಸಮಾಜದ ಆಸ್ತಿ. ಅವರ ನೆರಳಿನಲ್ಲಿ ನಾವು ಬದುಕುತ್ತೇವೆ. ಅವರಿಗೆ ವಯಸ್ಸಾದಾಗ ನಾವು ಅವರಿಗೆ ಜತೆಯಾಗಿರಬೇಕು. ಹಿರಿಯರನ್ನು ಗೌರವಿಸುವುದು ಸಂಪ್ರದಾಯ. ಎರಡೂವರೆ ದಶಕಗಳಿಂದ ನಿವೃತ್ತ ನೌಕರರ ಸಂಘ ಸಾರ್ಥಕ ಕೆಲಸ ಮಾಡುತ್ತಿದೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ನಿವೃತ್ತ ಯೋಧ ಬಿ.ಟಿ.ಸೋಮನ್ ಬೇಳೂರು, ಸಾಮಾಜಿಕ ಕಾರ್ಯಕರ್ತ ಟಿ.ವಿ.ಪಾಂಡುರಂಗ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಸಂಘದ ಅಧ್ಯಕ್ಷ ಉಮೇಶ್ ಹಿರೇನಲ್ಲೂರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಕಾರಿಗಳಾದ ವಿ.ಸುವರ್ಣಾ ನಾಯ್ಕ, ನಿವೃತ್ತ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ, ಬಸವರಾಜ್, ಸತ್ಯನಾರಾಯಣ, ಸುಬ್ರಹ್ಮಣ್ಯ ಭಟ್ ಇತರರಿದ್ದರು.