

ಚಿತ್ರದುರ್ಗ: ಹಿರಿಯಚೇತನರ ಕುರಿತು ಉದಾಸೀನ, ನಿರ್ಲಕ್ಷೆ ಭಾವನೆ ಸಲ್ಲದು. ಎಲ್ಲರೂ ಗೌರವದಿಂದ ಕಾಣಲು ಮುಂದಾಗಿ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ವಿವಿಧ ಇಲಾಖೆ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಂದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗಾಗಿ ನ್ಯಾಯಮಂಡಳಿ ಇದೆ. ಜಿಲ್ಲಾಸ್ಪತ್ರೆಗಳಲ್ಲಿ 10 ಹಾಸಿಗೆ ಮೀಸಲಿಡಲಾಗಿದೆ. ಸರ್ಕಾರ ಕೂಡ ಸುರಕ್ಷಾ ಭಾವನೆ ಮೂಡಿಸುವ ಕಾರ್ಯ ಮಾಡುತ್ತಿದೆ. ಅಧಿಕಾರಿಗಳು ಕಚೇರಿಗಳಿಗೆ ಅಲೆದಾಡಿಸದೆ ಅವರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ. ಯುವಸಮೂಹ ಮನಸ್ಥಿತಿ ಬದಲಿಸಿಕೊಂಡು ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸದೆ ಮುತುವರ್ಜಿಯಿಂದ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಹೆಚ್ಚುವರಿ ಜಿಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿದ್ದು, ಹಿರಿಯ ನಾಗರಿಕರನ್ನು ನಡೆಸಿಕೊಳ್ಳುವ ರೀತಿ ಮನಸ್ಸಿಗೆ ನೋವುಂಟು ಮಾಡುತ್ತಿದೆ. ಕೂಡು ಕುಟುಂಬ ಕಾಣಲು ಸಾಧ್ಯವಿಲ್ಲದಾಗಿದೆ. ವಿದ್ಯಾವಂತರಾದರೆ ಸಾಲದು, ಮೊದಲು ಮಾನವರಾಗಬೇಕು. ಸರ್ವರನ್ನು ಆತ್ಮೀಯವಾಗಿ ಕಾಣುವ, ಗೌರವಿಸುವ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರಿಗೆ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಉತ್ಸಾಹದಿಂದ ಜೀವನ ಸಾಗಿಸಿ. ಆಸ್ತಿಗಾಗಿ ಅನಕ್ಷರಸ್ಥ ವೃದ್ಧರನ್ನು ಮಕ್ಕಳು, ಮೊಮ್ಮಕ್ಕಳು ವಂಚಿಸಿರುವ ಪ್ರಕರಣಗಳಿವೆ. ಆದ್ದರಿಂದ ಜಾಗ್ರತೆಯಿಂದಿರಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಹಿರಿಯ ನಾಗರಿಕರಿಗೆ ಸರ್ಕಾರದಿಂದ ವೃದ್ಧಾಶ್ರಮ, ಸಹಾಯವಾಣಿ ಕೇಂದ್ರ, ಹಗಲು ಯೋಗಕ್ಷೇಮ ಕೇಂದ್ರ, ಸಂಧ್ಯಾ ಸುರಕ್ಷಾ ಯೋಜನೆ, ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ, ಗುರುತಿನ ಚೀಟಿ, ಪಿಂಚಣಿ ಸೇರಿ ಇತರ ಸೌಲಭ್ಯ ಸರ್ಕಾರ ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.
ಶತಾಯುಷಿಗಳಿಗೆ ಸನ್ಮಾನ: ಶತಾಯುಷಿಗಳಾದ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗೊಲ್ಲರಹಟ್ಟಿಯ ಹೊನ್ನಜ್ಜಿ, ತೋಪರಮಾಳಿಗೆ ಗ್ರಾಮದ ರಾಮರೆಡ್ಡಿ, ಕೋಟೆನಗರಿಯ ರೇವಣಸಿದ್ದಪ್ಪ, ಚಿತ್ರಕಲೆ, ವರ್ಣ ವಿನ್ಯಾಸಕ್ಕೆ ಮೋಹನ ಮುರಳಿ ತಳುಕು, ಸಾಹಿತ್ಯ ಕ್ಷೇತ್ರದಲ್ಲಿ ಎಂ.ಮೃತ್ಯುಂಜಯಪ್ಪ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಎಸಿ ಎಂ.ಕಾರ್ತಿಕ, ತಹಶೀಲ್ದಾರ್ ಡಾ.ನಾಗವೇಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಸಂಘದ ಅಧ್ಯಕ್ಷ ಆರ್.ರಂಗಪ್ಪರೆಡ್ಡಿ ಇತರರಿದ್ದರು.