

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆನರಾ ಬ್ಯಾಂಕ್ ಬೃಹತ್ ಪ್ರಮಾಣದಲ್ಲಿ ಬೆಳೆದು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನದಲ್ಲಿರಲು ಹಿರಿಯರು ದುಡಿದು ಭದ್ರ ಬುನಾದಿ ಹಾಕಿಕೊಟ್ಟಿದ್ದೇ ಕಾರಣ. ಹಿರಿಯರು ಬ್ಯಾಂಕ್ ಅಭಿವೃದ್ಧಿಗೆ ಮಾಡಿದ ತ್ಯಾಗ ಸಣ್ಣದಲ್ಲ. ಮುಂದಿನ ದಿನಗಳಲ್ಲೂ ಬ್ಯಾಂಕ್ ಇನ್ನಷ್ಟು ಬಲಿಷ್ಠವಾಗಲು ಎಲ್ಲರ ಸಹಕಾರ, ಸಹಾಯ ಇರಲಿ ಎಂದು ಕೆನರಾ ಬ್ಯಾಂಕ್ ಹುಬ್ಬಳ್ಳಿ ವಲಯ ಕಚೇರಿ ಮಹಾ ಪ್ರಬಂಧಕ ಎಂ. ವಿಜಯಕುಮಾರ ಹೇಳಿದರು.
ನಗರದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಸರ್ವ ಸದಸ್ಯರ ಸಭೆ ಮತ್ತು 75ವರ್ಷ ಪೂರ್ಣಗೊಳಿಸಿದ ನಿವೃತ್ತ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಸ್. ಜಗದೀಶ ಮಾತನಾಡಿ, ನಿವೃತ್ತರ ಪಿಂಚಣಿ ಹೆಚ್ಚಳ, ವಿಮೆ, ಇತ್ಯಾದಿ ವಿಷಯಗಳ ಕುರಿತು ಸಾಕಷ್ಟು ಮಾತುಕತೆಗಳು ನಡೆಯುತ್ತಿವೆ. ಈ ವಿಷಯದಲ್ಲಿ ನಿವೃತ್ತರಿಗೆ ಶೀಘ್ರದಲ್ಲಿ ನ್ಯಾಯ ಸಿಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎನ್. ಕುಲಕರ್ಣಿ ಮಾತನಾಡಿ, ನಿವೃತ್ತರು ಏನಾದರೂ ಕೆಲಸದಲ್ಲಿ ತೊಡಗಿರಬೇಕು. ಕೆನರಾ ಬ್ಯಾಂಕ್ ನಮಗೆ ಕೊಟ್ಟಿರುವ ಸೌಕರ್ಯಗಳಿಗೆ ನಾವು ಸದಾ ಕೃತಜ್ಞರಾಗಿರಬೇಕು. ನಿವೃತ್ತಿ ಹೊಂದಿದ್ದರೂ ನಮ್ಮ ಬ್ಯಾಂಕಿನ ಅಭಿವೃದ್ಧಿಗೆ ಯಾವ ಅಪೇಕ್ಷೆ ಇಲ್ಲದೆ ದುಡಿಯಲು ಸಿದ್ಧರಿದ್ದೇವೆ ಎಂದರು.
ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘದ ಮಾಜಿ ಕಾರ್ಯದರ್ಶಿ ಕೆ.ಬಿ. ಬಳ್ಳೂರ, ಮನೋಹರ ಜೋಶಿ, ಎಸ್.ಎಂ. ದೇಶಪಾಂಡೆ, ಅಶೋಕ ಮಠದ, ಪಿ.ಜಿ. ಪೂಜಾರ, ಕೆ.ಬಿ. ಕುಲಕರ್ಣಿ, ಎ.ಎಸ್. ನಾರಾಯಣ, ಎಸ್.ಟಿ. ಹಬೀಬ, ವಿ.ಎಂ. ಶೇಟ್ ಅವರನ್ನು ಸನ್ಮಾನಿಸಲಾಯಿತು.
ಸಿ.ಬಿ. ಪ್ರಭಾಕರ, ಹ.ವೆಂ. ಕಾಖಂಡಕಿ, ಎಂ.ಎಂ. ಹುಬ್ಬಳ್ಳಿ, ಇತರರು ಇದ್ದರು. ಕಿಶೋರ ಮಾಡಲಗಿ ಸ್ವಾಗತಿಸಿದರು. ಗುರುನಾಥ ಇನಾಮದಾರ ನಿರೂಪಿಸಿದರು. ಅನಂತ ಥಿಟೆ ವಂದಿಸಿದರು.