ಹಿರಿಯರ ಜೇಬಿಗೂ ಸರ್ಕಾರ ಕತ್ತರಿ, ರೈಲ್ವೆ ಟಿಕೆಟ್ ರಿಯಾಯಿತಿ ರದ್ದು

30 BIRUR 01.jpg web 2
Published on

ಬೀರೂರು: ಹಿರಿಯ ನಾಗರಿಕರ ರೈಲು ಪ್ರಯಾಣದ ದರದಲ್ಲಿ ರಿಯಾಯಿತಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಶನಿವಾರ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾ ಅಧ್ಯಕ್ಷ ಡಾ.ಅಂಶುಮಂತ್​ಗೌಡ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಜೆಪಿ ಸರ್ಕಾರ ಈಗ ಹಿರಿಯ ನಾಗರಿಕರ ರೈಲು ಪ್ರಯಾಣ ದರದ ರಿಯಾಯಿತಿಯನ್ನು ಕಿತ್ತುಕೊಂಡು ತಾನು ಸರ್ವಾಧಿಕಾರಿ ಎಂಬುದನ್ನು ನಿರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಜೀವಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಗೌರವ ಸೂಚಿಸಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗುವ ಬದಲು ಹಿರಿಯರ ಗೌರವಕ್ಕೆ ಚ್ಯುತಿ ತಂದಿದೆ. ಕೇವಲ ಆಪ್ತರ ಉದ್ಧಾರಕ್ಕಾಗಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ಹಿರಿಯ ನಾಗರಿಕರಿಗೆ ರೈಲು ಪ್ರಯಾಣದ ದರದಲ್ಲಿನ ರಿಯಾಯಿತಿಯನ್ನು ಕಸಿದುಕೊಂಡಿರುವುದು ಕುಟುಂಬದ ಹಿರಿಯರಿಗೆ ಅಗೌರವ ಸೂಚಿಸಿದಂತೆ ಭಾಸವಾಗಿದೆ. ಬಡ ವರ್ಗವನ್ನು ಸರ್ವನಾಶ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಡಳಿತ ನಡೆಯುತ್ತಿವೆ. ಈಗ ವೃದ್ಧರ ಜೇಬಿಗೂ ಕನ್ನ ಹಾಕುತ್ತಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net