ಹಿರಿಯರ ಅನುಭವ ಸಮಾಜಕ್ಕೆ ಅವಶ್ಯಕ

 ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ೮೦ ವರ್ಷ ಮೇಲ್ಪಟ್ಟ ಸರ್ಕಾರಿ ನಿವೃತ್ತ ನೌಕರರಾದ ಕಾಶಪ್ಪ ಬಾಲಿಕಿಲೆ, ವಿಶ್ವನಾಥಯ್ಯ ಸ್ವಾಮಿ, ಸಿದ್ರಾಮಪ್ಪ ಕಲ್ಯಾಣಿ, ಮಲ್ಲಯ್ಯ ಹಿರೇಮಠ, ಭೀಮಣ್ಣ ಚಾರ್ಲ, ಸಂಗಪ್ಪ ಮಹಾಜನ್ ಅವರನ್ನು ಸನ್ಮಾನಿಸಲಾಯಿತು. ಕಲಬುರಗಿ ಮಹಾನರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ, ಡಾ.ಸೋಮನಾತ ಯಾಳವಾರ, ಶಂಭುಲಿಂಗ ಕಾಮಣ್ಣ, ನಾಗಪ್ಪ ಜಂಬಗಿ, ಎಸ್‌ಬಿ.ಕುಚಬಾಳ, ಜಗನ್ನಾಥ ಪತಂಗೆ, ಶಂಕರ ಕರ್ಣೆ ಇತರರಿದ್ದರು.
Published on

ಬಸವಕಲ್ಯಾಣ: ಹಿರಿಯರು ಸಮಾಜದ ಆಸ್ತಿ. ಅವರ ಅನುಭವ ಹಾಗೂ ಮಾರ್ಗದರ್ಶನ ಸಮಾಜಕ್ಕೆ ಅವಶ್ಯಕ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಸ್ತಿ ಅಧಿಕಾರಿ ಸಾವಿತ್ರಿ ಸಲಗರ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದಿಂದ ಎಸ್‌ಎಸ್‌ಕೆಬಿ ಕಾಲೇಜು ಬಳಿಯ ಯಾತ್ರಿ ನಿವಾಸದಲ್ಲಿ ಶನಿವಾರ ಆಯೋಸಿದ್ದ ೮೦ ವರ್ಷ ಮೇಲ್ಪಟ್ಟ ಸರ್ಕಾರಿ ನಿವೃತ್ತ ನೌಕರರ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕ್ರಿಯಾಶೀಲರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಹಿರಿಯ ನಾಗರಿಕರು ಸಮಯದ ಜತೆಗೆ ಹೊಂದಾಣಿಗೆ ಮಾಡಿಕೊಂಡು ಜೀವನದಲ್ಲಿ ಎದುರಾಗುವ ಎಲ್ಲ ಪರಿಸ್ಥಿತಿಯನ್ನು ಧನಾತ್ಮಕವಾಗಿ ಸ್ವೀಕರಿಸಬೇಕು. ಸತ್ಸಂಗ, ಪ್ರೇಕ್ಷಣೀಯ ಸ್ಥಳಗಳ ಪ್ರವಾಸ, ಸಣ್ಣ, ಪುಟ್ಟ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ಸಾಹದಿಂದ ಇರಬೇಕು ಎಂದು ಹೇಳಿದರು.

ಸಾಹಿತಿ ಡಾ.ಸೊಮನಾಥ ಯಾಳವಾರ ಮಾತನಾಡಿ, ಕೌಟುಂಬಿಕ ವ್ಯವಸ್ಥೆ ಸಡಿಲಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ, ಮನೆ ಮತ್ತು ಸಮಾಜದಲ್ಲಿ ಹಿರಿಯನ್ನು ಗೌರವದಿಂದ ಕಾಣುವ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು. ಹಿರಿಯರು ಚಿಂತೆ ಮಾಡದೇ ಕೈಲಾದ ಒಂದಿಲ್ಲೊಂದು ಕಾರ್ಯಚಟುವಟಿಕೆಯಲ್ಲಿ ತೊಂಡಗಿಸಿಕೊಳ್ಳಬೇಕು ಎಂದರು.

ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಕಾಶಪ್ಪ ಬಾಲಿಕಿಲೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ನಾಗಪ್ಪ ಜಂಬಗಿ, ಜಿಲ್ಲಾ ಪ್ರಧಾನ ಕಾರ್ಯ ಎಸ್‌ಬಿ.ಕುಚಬಾಳ, ರಾಜ್ಯ ಸಹ ಕಾರ್ಯದರ್ಶಿ ಪ್ರಭಾಕರ ಸೋನಿ, ರಾಜ್ಯ ಪರಿಷತ್ ಸದಸ್ಯ ಜಗನ್ನಾಥ ಪತಂಗೆ, ಜಿಲ್ಲಾ ಪ್ರತಿನಿಧಿ ಶಂಕರ ಕರ್ಣೆ, ರಾಜಪ್ಪ ಬಿರಾದಾರ ಇತರರಿದ್ದರು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಹುಡೇದ ಸ್ವಾಗತಿಸಿದರು. ಗೌರವ ಅಧ್ಯಕ್ಷ ಬಸವಣ್ಣಪ್ಪ ನೆಲ್ಲಗಿ ಪ್ರಾಸ್ತಾವಿಕ ಮಾತನಾಡಿದರು. ಕಲ್ಲಪ್ಪ ಪುಜಾರಿ ವಂದಿಸಿದರು. ಖಜಾಂಚಿ ಅಂಬಾರಾಯ ಸೈದಾಪುರೆ ನಿರೂಪಣೆ ಮಾಡಿದರು. ೮೦ಕ್ಕೂ ವರ್ಷ ಮೇಲ್ಪಟ್ಟ ಸುಮಾರು ೨೭ ಸರ್ಕಾರಿ ನಿವೃತ್ತ ನೌಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net