ಹಿರಿಯರ ಅನುಭವ ಕಿರಿಯರಿಗೂ ದಾರಿದೀಪ

24rajesh6
Published on

ಚಾಮರಾಜನಗರ: ಹಿರಿಯರ ಬದುಕಿನ ಅನುಭವ ಮತ್ತು ಸಾಧನೆಯು ಕಿರಿಯರಿಗೂ ದಾರಿದೀಪವಾಗಲಿದೆ ಎಂದು ಹಿರಿಯ ಸಾಹಿತಿ ಸಿ.ಮಂಜುನಾಥ ಪ್ರಸನ್ನ (ಮಂಜು ಕೋಡಿಉಗನೆ) ಹೇಳಿದರು.

ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಅಭ್ಯಾಸಿ ಟ್ರಸ್ಟ್ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಅಭ್ಯಾಸಿ ಕನ್ನಡ ಹಬ್ಬ ಮತ್ತು ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಬ್ಬದ ಉದ್ಘಾಟನೆಯ ಸ್ವರೂಪವೇ ಕಲಾತ್ಮಕವಾಗಿ ಮೂಡಿ ಬಂದಿದೆ. ಕನ್ನಡ ನಾಡಿನಲ್ಲಿ ಅಪ್ರತಿಮ ಕಲಾಸೇವೆಯನ್ನು ಮಾಡಿದ ಹಿರಿಯ ಸಾಧಕರನ್ನು ಗುರುತಿಸಿ ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಗೀತ ವಿದ್ವಾಂಸರು ಮತ್ತು ಗ್ರಾಮೀಣ ರಂಗಭೂಮಿ ನಿರ್ದೇಶಕ ಜೆ.ಜಾಯ್‌ಫುಲ್ ಜಯಶೇಖರ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದರು.

ಸಂಗೀತ ನಿರ್ದೇಶಕ ಎ.ಎಸ್.ಪ್ರಸನ್ನ ಕುಮಾರ್ ಮಾತನಾಡಿ, ಮಕ್ಕಳನ್ನು ಸಂಗೀತ, ನಾಟಕಗಳಲ್ಲಿ ತೊಡಗಿಸುವುದರಿಂದ ಅವರಲ್ಲಿ ಲವಲವಿಕೆ, ಆತ್ಮವಿಶ್ವಾಸ, ಪರಸ್ಪರ ಸಹಾಯ ಮನೋಭಾವ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಓದಿನೊಂದಿಗೆ ಸಹಪಠ್ಯ ಚಟುವಟಿಕೆಗಳಲ್ಲಿ ಮಕ್ಕಳಿಗೆ ಅವಕಾಶ ಮಾಡಿಕೊಡುವುದು ಅತೀ ಮುಖ್ಯವಾಗಿದೆ ಎಂದರು.

ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಮತ್ತು ರಂಗ ನಿರ್ದೇಶಕ ಕಿರಣ್ ಗಿರ್ಗಿ ಮಾತನಾಡಿ, ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿಯನ್ನು ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 60 ವರ್ಷ ಮೇಲ್ಪಟ್ಟ ಹಿರಿಯ ಸಾಧಕರನ್ನು ಪ್ರತೀ ವರ್ಷ ಗೌರವಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಪ್ರಶಸ್ತಿ ಫಲಕ ಮತ್ತು 5 ಸಾವಿರ ರೂಪಾಯಿ ನಗದನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಎಸ್.ವಿ. ಪ್ರತಿಷ್ಠಾನದ ಬಿ.ವಿ. ವೆಂಕಟನಾಗಪ್ಪಶೆಟ್ಟಿ, ವಕೀಲ ಪುಟ್ಟಸ್ವಾಮಿ, ಸಾಹಿತಿ ಕೆ.ಶ್ರೀಧರ್, ಸುರೇಂದ್ರ ದೇಶ್ವಳ್ಳಿ, ಮಹಾಲಿಂಗ್ ಗಿರ್ಗಿ, ಶೇಖರ್ ಮುದ್ದು, ಕಲೆ ನಟರಾಜ್ ಹಾಗೂ ಇತರರು ಹಾಜರಿದ್ದರು.

ಗಮನ ಸೆಳೆದ ನಾಟಕಗಳು:

ರಂಗಕರ್ಮಿ ಕಿರಣ್ ಗಿರ್ಗಿ ನಿರ್ದೇಶನದಲ್ಲಿ ಅಭ್ಯಾಸಿ ಟ್ರಸ್ಟ್ ಕಲಾವಿದರು ಮತ್ತು ಮಕ್ಕಳು ಅಭಿನಯಿಸಿದ ಡಾ. ಎಂ.ಎಸ್.ಮೂರ್ತಿ ಅವರ ಯಶೋಧರೆ ಮಲಗಿರಲಿಲ್ಲ ಮತ್ತು ಮಂಜು ಕೋಡಿಉಗನೆ ಅವರ ಕಂಡಾಯದ ಕೋಳಿ ನಾಟಕಗಳು ಗಮನಸೆಯಿತು. ಅಭ್ಯಾಸಿ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ಮತ್ತು ಕೀಬೋರ್ಡ್ ವಾದ್ಯಸಂಗೀತ ಸುಮಧುರವಾಗಿ ಮೂಡಿಬಂದಿತು. ಚಿತ್ರ ಕಲಾವಿದ ಮಧುಸೂದನ್ ಹೊಸೂರು ನಿರ್ಮಿಸಿದ್ದ ಆನೆ ಸ್ತಬ್ಧಚಿತ್ರ ಮತ್ತು ಕನ್ನಡ ಬಾವುಟವು ಅಭ್ಯಾಸಿ ಕನ್ನಡ ಹಬ್ಬದ ವಿಶೇಷ ಆಕರ್ಷಣೆಯಾಗಿ ಜನರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net