

ಚಿತ್ರದುರ್ಗ: ಮಕ್ಕಳು ತಂದೆ-ತಾಯಿಗಳನ್ನು ಮುಪ್ಪಿನ ಕಾಲದಲ್ಲಿ ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಸರ್ಕಾರದ ಅನೇಕ ಸೌಲಭ್ಯಗಳು ಹಿರಿಯ ನಾಗರಿಕರಿಗೆ ಸಿಗಬೇಕು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಸವೇಶ್ವರ ವಿದ್ಯಾಸಂಸ್ಥೆಯಿಂದ ಬುಧವಾರ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರು, ಅಂಗವಿಕಲರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರಿಗೆ ಸರ್ಕಾರದಿಂದ ಏಕೆ ಸೌಲಭ್ಯ ಕೊಡಬೇಕು ಎನ್ನುವ ಪ್ರಶ್ನೆ ಉದ್ಬವವಾಗಿದೆ. ಮಕ್ಕಳಿಂದ ತಿರಸ್ಕಾರಕ್ಕೆ ಒಳಗಾಗುವ ಪಾಲಕರಿಗೆ ಸೌಕರ್ಯ ನೀಡುವುದು ತಪ್ಪಲ್ಲ. ಕುಟುಂಬ ಎನ್ನುವ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಅರವತ್ತು ವರ್ಷವೆಂದರೆ, ಯಾರೂ ನಂಬುವುದಿಲ್ಲ. ಅದಕ್ಕಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಗುರುತಿನ ಚೀಟಿ ಅತ್ಯವಶ್ಯಕವಾಗಿದ್ದು, ಕಡ್ಡಾಯವಾಗಿ ಪಡೆದುಕೊಳ್ಳಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಕಡಿಮೆಯಾಗುತ್ತಿರುವ ಕಾರಣ ತಂದೆ-ತಾಯಿಯನ್ನು ಕೀಳಾಗಿ ನೋಡುತ್ತಿದ್ದಾರೆ. ಹೀಗಾಗಿ ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿವೆ. ಹಿರಿಯ ನಾಗರಿಕರಿಗೆ ಏನೇ ತೊಂದರೆಯಾದರೂ ರಕ್ಷಣೆ ಕೊಡಬೇಕಿದೆ. ಮಿತ ವ್ಯಾಯಾಮ ಮಾಡಿ, ಆರೋಗ್ಯದ ಕುರಿತು ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ಮಾತನಾಡಿ, ಕೇಂದ್ರದಿಂದ ಕಳೆದ 26 ವರ್ಷಗಳಿಂದಲೂ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುತ್ತ ಬರುತ್ತಿದ್ದೇವೆ. 15 ಅಂಗವಿಕಲರನ್ನು ಬೆಂಗಳೂರಿನ ಇನ್‌ಫೋಸಿಸ್‌ನಲ್ಲಿ ಕೆಲಸಕ್ಕೆ ಸೇರಿಸಲಾಗಿದೆ. ಮಕ್ಕಳಿಂದ ತೊಂದರೆ ಅನುಭವಿಸುತ್ತಿರುವ ಹಿರಿಯ ನಾಗರಿಕರಿಗೆ ನಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಎನ್.ಮೃತ್ಯುಂಜಯ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಸಿ.ಸೋಮಶೇಖರ, ಎಸ್.ಕೆ.ಪ್ರಭಾವತಿ, ಉಪವಿಭಾಗಾಧಿಕಾರಿ ಕಚೇರಿಯ ರಾಮಪ್ರಸಾದ್ ಇತರರಿದ್ದರು.