

ಸಂಕೇಶ್ವರ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ನಿಖಿಲ ಉಮೇಶ ಕತ್ತಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಶೈಲಪ್ಪ ಬಸವಣ್ಣೆಪ್ಪ ಮಗದುಮ್ಮ ಅವರು ಅವಿರೋಧವಾಗಿ ಸಚಿವ ಉಮೇಶ ಕತ್ತಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ನೇತೃತ್ವದಲ್ಲಿ ಸೋಮವಾರ ಮರು ಆಯ್ಕೆಯಾದರು.
ಆಡಳಿತ ಮಂಡಳಿಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅ ವರ್ಗದ 10 ಹಾಗೂ ಬ ವರ್ಗದ 1 ಸೇರಿ 11 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರವೀಂದ್ರ ಕರಲಿಂಗನವರ ಅವರು, ಕಾರ್ಖಾನೆಯ ಸದಸ್ಯರ ಸರ್ವ ಸಾಧಾರಣ ಸಭೆಯಲ್ಲಿ ಘೋಷಿಸಿದರು.
ಇದಕ್ಕೂ ಮುನ್ನ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಕುರಿತು ಕರೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷರಾಗಿ ನಿಖಿಲ ಉಮೇಶ ಕತ್ತಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಶೈಲಪ್ಪ ಬಸವಣ್ಣೆಪ್ಪ ಮಗದುಮ್ಮ ಅವರನ್ನು ಆಯ್ಕೆ ಮಾಡಲು ಸರ್ವಾನುಮತದಿಂದ ಬಾಕಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಆಹಾರ ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಮಾತನಾಡಿ, ಕಾರ್ಖಾನೆಯ ಪ್ರಗತಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ನೂತನ ಅಧ್ಯಕ್ಷ ನಿಖಿಲ ಕತ್ತಿ ಮಾತನಾಡಿ, ಸಹಕಾರಿ ಮಹರ್ಷಿ ದಿ.ಅಪ್ಪಣಗೌಡ ಪಾಟೀಲ ಸ್ಥಾಪಿಸಿದ ಕಾರ್ಖಾನೆಗೆ ಎರಡನೇ ಬಾರಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆಗೊಳಿಸುವ ಮೂಲಕ ಕಾರ್ಖಾನೆ ಸದಸ್ಯರು ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ. ಕಾರ್ಖಾನೆ ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರು, ಅಧಿಕಾರ ವರ್ಗದ ಸಹಕಾರದಿಂದ 110 ದಿನಗಳಲ್ಲಿ 8.5 ಲಕ್ಷ ಮೆ.ಟನ್ ಕಬ್ಬು ನುರಿಸಿ ಇಂದಿಗೆ 10 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಲಾಗಿದೆ. ಮುಂದಿನ ದಿನಗಳಲ್ಲಿ 10-11 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಾರ್ಖಾನೆಯನ್ನು ಸಚಿವ ಉಮೇಶ ಕತ್ತಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅವರ ಮಾರ್ಗದರ್ಶನ, ತಾಲೂಕಿನ ಹಿರಿಯರ ಸಹಕಾರದೊಂದಿಗೆ ಪ್ರಗತಿಪಥದತ್ತ ಕೊಂಡೊಯ್ಯುತ್ತೇವೆ ಎಂದರು.
ಬಸಗೌಡರ ಕುಟುಂಬಕ್ಕೊಂದು ಸ್ಥಾನ: ವಿಧಾನ ಪರಿಷತ್ ಮಾಜಿ ಸದಸ್ಯ, ದಿ.ಬಸಗೌಡ ಪಾಟೀಲ ಅವರ ಪುತ್ರ ಪ್ರಭುದೇವ ಪಾಟೀಲ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎನ್ನುತ್ತಿದ್ದ ಕತ್ತಿ ಸಹೋದರರು ಇದೀಗ ದಿ.ಬಸಗೌಡ ಪಾಟೀಲ ಅವರ ಪುತ್ರನನ್ನು ನಿರ್ದೇಶಕನನ್ನಾಗಿ ಆಯ್ಕೆಗೊಳಿಸುವ ಮೂಲಕ ರಾಜಕೀಯ ರಹಿತ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಮುನ್ನುಡಿ ಬರೆದಿದ್ದಾರೆ.
ನೂತನ ನಿರ್ದೇಶಕರಾದ ಶಿವಪುತ್ರ ಶಂಕರೆಪ್ಪ ಶಿರಕೋಳಿ, ಪ್ರಭುದೇವ ಬಸಗೌಡ ಪಾಟೀಲ, ಶಿವನಾಯಿಕ ವೀರಭದ್ರ ನಾಯಿಕ, ಸುರೇಶ ಬಸಲಿಂಗಪ್ಪ ಬೆಲ್ಲದ, ಬಾಬಾಸಾಹೇಬ ಪರಪ್ಪ ಅರಬೋಳೆ, ಅಶೋಕ ಬಸವಂತಪ್ಪ ಪಟ್ಟಣಶೆಟ್ಟಿ, ಬಸಪ್ಪ ಲಗಮಪ್ಪ ಮರಡಿ, ಬಸವರಾಜ ಶಂಕರ ಕಲ್ಲಟ್ಟಿ, ಸುರೇಂದ್ರ ಶಂಕರ ದೊಡ್ಡಲಿಂಗನವರ ಪ್ರಮಾಣ ಪತ್ರ ಸ್ವೀಕರಿಸಿದರು.
ತಹಸೀಲ್ದಾರ್ ಡಿ.ಎಚ್.ಹೂಗಾರ, ಮಾರುತಿ ಅಷ್ಟಗಿ, ಗಿರೀಶ ಪಾಟೀಲ, ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ, ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಕಲ್ಲಣ್ಣ ಚೌಗಲಾ, ಪ್ರಶಾಂತ ಪಾಟೀಲ, ಸುನೀಲ ಪರ್ವತರಾವ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಕರ್ಕಿನಾಯಿಕ, ಆಡಳಿತ ಸಮನ್ವಯಾಧಿಕಾರಿ ಜಯಸಿಂಗ ಸನದಿ ಇದ್ದರು.