ಹಿಮ್ಸ್‌ನಲ್ಲಿಯೇ ವೈದ್ಯರು, ನರ್ಸ್‌ಗಳಿಗೆ ತಂಗಲು ವ್ಯವಸ್ಥೆ

images
Published on



ವಿಜಯವಾಣಿ ವಿಶೇಷ ಹಾಸನ
ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗೆ ಇಷ್ಟು ದಿನ ನೀಡಿದ್ದ ವಾಸ್ತವ್ಯ ಸೌಲಭ್ಯವನ್ನು ಸರ್ಕಾರ ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಹಿಮ್ಸ್ ಆಡಳಿತ ಮಂಡಳಿಯೇ ಸಿಬ್ಬಂದಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದೆ.
ಹೋಟೆಲ್ ಸೌಲಭ್ಯ ರದ್ದುಗೊಂಡಿರುವುದರಿಂದ ವೈದ್ಯರು ಹಾಗೂ ನರ್ಸ್‌ಗಳ ಹಿತರಕ್ಷಣೆಗೆ ಮುಂದಾಗಿರುವ ಹಿಮ್ಸ್ ಆಡಳಿತ ಮಂಡಳಿ, ಸಂಸ್ಥೆಯ ಕೊಠಡಿಗಳಲ್ಲೇ ತಂಗಲು ವ್ಯವಸ್ಥೆ ಕಲ್ಪಿಸಿದೆ. ಸಿಬ್ಬಂದಿ ಅಥವಾ ವೈದ್ಯರು ಏಳು ದಿನಗಳ ಕರ್ತವ್ಯ ಮುಗಿಸಿಕೊಂಡು ನಿಗದಿತ ಕೊಠಡಿಯಲ್ಲೇ ಇರಬೇಕು. ಆ ಬಳಿಕ ಐದು ದಿನ ಹೋಂ ಕ್ವಾರಂಟೈನ್ ಆಗಬೇಕು. ನಂತರ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ.
ಮೇ 12 ರಿಂದ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗ ಸೋಂಕಿತರ ಸಂಖ್ಯೆ 30ಕ್ಕೆ ಏರಿದೆ. ಕೋವಿಡ್-19 ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಸಿಬ್ಬಂದಿ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಕರೊನಾ ಸೋಂಕಿತರ ಆರೋಗ್ಯ ತಪಾಸಣೆಯಲ್ಲಿ ತೊಡಗುವ ವೈದ್ಯರನ್ನು ನಗರದ ಹೋಟೆಲ್‌ವೊಂದರಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿತ್ತು. 70 ಹಾಸಿಗೆಯ ಹೋಟೆಲ್ ಅನ್ನು ವಶಕ್ಕೆ ಪಡೆದಿದ್ದ ಜಿಲ್ಲಾಡಳಿತ, ಸಿಬ್ಬಂದಿಯನ್ನು ಇಷ್ಟು ದಿನ ಮನೆಯಿಂದ ದೂರ ಇರಿಸಿದ್ದರು. ಆದರೆ ಸರ್ಕಾರ ಹೋಟೆಲ್ ವ್ಯವಸ್ಥೆ ರದ್ದುಗೊಳಿಸಿ ಆದೇಶಿಸಿದ್ದು, ಕರ್ತವ್ಯ ನಿರತರು ಹೋಂ ಕ್ವಾರಂಟೈನ್ ಆಗಲಿ ಎಂದು ಹೇಳಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ವೈದ್ಯರು, ನರ್ಸ್‌ಗಳು ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದರು.
ಎಣ್ಣೆ, ಸಿಗರೇಟ್‌ಗೆ ದುಂಬಾಲು:
ಕರೊನಾ ಸೋಂಕಿತರು ತಮ್ಮ ಪ್ರಾಣಕ್ಕೆ ಕುತ್ತು ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದರೆ, ಶಂಕಿತರೆನಿಸಿಕೊಂಡು ದಾಖಲಾಗಿರುವ ಬಹುತೇಕರು ತಮಗೆ ಎಣ್ಣೆ, ಸಿಗರೇಟ್ ಬೇಕೆಂದು ವೈದ್ಯರ ಪ್ರಾಣ ಹಿಂಡುತ್ತಿದ್ದಾರೆ. ಕೋವಿಡ್-19 ಆಸ್ಪತ್ರೆಯಲ್ಲಿ 294 ಜನ ಕರೊನಾ ಶಂಕಿತರಿದ್ದು, ಎಲ್ಲರೂ ಮುಂಬೈಯಿಂದ ಬಂದವರು.
’ಪ್ರತಿದಿನ ಸಂಜೆ 5 ಗಂಟೆಯಾಗುತ್ತಿದ್ದಂತೆ ವ್ಯಕ್ತಿಯೊಬ್ಬ ತನಗೆ ಸ್ಮಾಲ್ ಸಿಗರೇಟ್, ಒಂದು ಕಫ್ ಚಹಾ ಬೇಕೆ ಬೇಕೆಂದು’ ಗಲಾಟೆ ಮಾಡುತ್ತಾನೆ. ಇನ್ನೊಬ್ಬ ಬಾಗಿಲಿಗೆ ಬಂದು ’ಎಷ್ಟು ದುಡ್ಡು ಬೇಕು ಕೇಳು ವಿಸ್ಕಿ ತೆಗೆದುಕೊಂಡು ಬಾ’ ಎಂದು ವೈದ್ಯರಿಗೆ ಗುಟುರು ಹಾಕುತ್ತಿದ್ದಾನೆ. ಶಂಕಿತರನ್ನು ನಿಯಂತ್ರಿಸುವುದು ಹರಸಾಹಸದ ಕೆಲಸವಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ ತಿಳಿಸಿದರು.


ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಹಾಗೂ ನರ್ಸ್‌ಗಳಿಗೆ ಕಲ್ಪಿಸಿದ್ದ ಹೋಟೆಲ್ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆದಿದೆ. ಆದರೆ ಸಿಬ್ಬಂದಿಯನ್ನು ಮನೆಗೆ ಕಳುಹಿಸಿಕೊಡುವುದಿಲ್ಲ. ಸಂಸ್ಥೆಯಲ್ಲೇ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ.
ಡಾ. ಕೃಷ್ಣಮೂರ್ತಿ, ಜಿಲ್ಲಾ ಶಸ್ತ್ರಚಿಕಿತ್ಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net