

ಹಾಸನ: ಕುಟುಂಬ ದತ್ತು ಕಾರ್ಯಕ್ರಮವನ್ನು ಅನುಷ್ಠಾನ ಮಾಡಿರುವ ಹಿಮ್ಸ್ ಸಂಸ್ಥೆ, ಅನೇಕ ಬಡಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಭಾಪತಿಗಳಾದ ಎಚ್.ಪಿ. ಮೋಹನ್ ಹೇಳಿದರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾನುಸಾರ ವೀರಾಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎರಡನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬ ದತ್ತು ಕಾರ್ಯಕ್ರಮ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಿಂದ ಗ್ರಾಮಕ್ಕೆ ಉತ್ತಮ ಆರೋಗ್ಯ ಸೌಲಭ್ಯ ನೀಡುತ್ತಿರುವುದು ಹಾಸನ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಈ ಸೌಲಭ್ಯಗಳನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಜನಸ್ನೇಹಿಯಾಗಿ ಆರೋಗ್ಯ ಸೇವೆಗಳನ್ನು ನೀಡಿ ಬಡವರ, ಗ್ರಾಮೀಣ ಭಾಗದ ರೋಗಿಗಳ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯ ಈ ಮಹತ್ವಪೂರ್ಣ ಮತ್ತು ಅರ್ಥಪೂರ್ಣ ಯೋಜನೆ ಶ್ಲಾಘನೀಯ ಎಂದರು.
ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ಸಿ.ರವಿಕುಮಾರ್ ಮಾತನಾಡಿ, ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯ ಪದವೀಧರರಿಗೆ ಸಮುದಾಯ ಆಧಾರಿತ ಆರೋಗ್ಯ ರಕ್ಷಣೆ ಮತ್ತು ಆ ಮೂಲಕ ಸಮುದಾಯದ ಜನರಿಗೆ ಆರೋಗ್ಯದಲ್ಲಿ ಸಮಾನತೆ ಬಗ್ಗೆ ಪ್ರಾಯೋಗಿಕ ಕಲಿಕೆಯ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕುಟುಂಬ ದತ್ತು ಕಾರ್ಯಕ್ರಮವನ್ನು ಮಾದರಿ ಯೋಜನೆಯನ್ನಾಗಿ ಮಾಡಿದಾಗ ಗ್ರಾಮೀಣ ಜನರ ಬದುಕು-ಬವಣೆಗಳ ಬಗ್ಗೆ ಯುವ ವೈದ್ಯರು ತಿಳಿದು ಆರೋಗ್ಯ ಸೇವೆ ನೀಡುವಂತಾಗುತ್ತದೆ. ಅಲ್ಲದೆ ವೈದ್ಯಕೀಯ ಸಂಸ್ಥೆಗಳು ಕೇವಲ ವೈದ್ಯರನ್ನು ಸೃಷ್ಟಿಸುವ ಕೆಲಸ ಮಾತ್ರವಲ್ಲದೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ ಎಂದರು.
ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ. ವಿ.ಆರ್. ಕೃಷ್ಣಮೂರ್ತಿ, ಜಿಲ್ಲಾ ಸಗಟು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಣ್ಣಮಂಜೇಗೌಡ, ಹಿಮ್ಸ್ ಶುಶ್ರೂಷಕ ಅಧೀಕ್ಷಕರಾದ ನಿರ್ಮಲಾ ಕುಮಾರಿ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎಂ. ವೆಂಕಟೇಶ್ ಹೂವಿನಹಳ್ಳಿಕಾವಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಶರತ್ ಚಂದ್ರ, ಸೀಗೆ ಗ್ರಾಮ ಪಂಚಾಯತಿ ಸದಸ್ಯರಾದ ದೊರೆಸ್ವಾಮಿ, ಆರೋಗ್ಯ ನಿರೀಕ್ಷಕ ಮೋಹನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.